ಕೋಲ್ಕತಾ: ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ ಒಂದೇ ಆವರಣದಲ್ಲಿ ಜೋಡಿ ಸಿಂಹಗಳಿಗೆ ಅಕ್ಬರ್ ಮತ್ತು ಸೀತಾ ಎಂದು ಇರುವ ಹೆಸರುಗಳನ್ನು ಮರುನಾಮಕರಣ ಮಾಡುವಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರಕಾರಕ್ಕೆ ಸೂಚನೆ ನೀಡಿದೆ.
ಹೆಸರಿನ ಕುರಿತು ವಿಶ್ವ ಹಿಂದೂ ಪರಿಷತ್ತಿನ ಬಂಗಾಳ ಘಟಕವು ಫೆಬ್ರವರಿ 16 ರಂದು ಜಲ್ಪೈಗುರಿಯಲ್ಲಿರುವ ಕಲ್ಕತ್ತಾ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅನ್ನು ಸಂಪರ್ಕಿಸಿತ್ತು.ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಂಗಾಳದ ಸಫಾರಿ ಪಾರ್ಕ್‌ನ ನಿರ್ದೇಶಕರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿತ್ತು.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ, ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸ್ಥಳಾಂತರಿಸಲಾಗಿದ್ದು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ಹೇಳಿದ್ದರು.
ಅಕ್ಬರ್ ಒಬ್ಬ ಮೊಘಲ್ ಚಕ್ರವರ್ತಿ ಮತ್ತು ಸೀತೆ ರಾಮಾಯಣದ ಒಂದು ಪ್ರಮುಖ ಪಾತ್ರ ಮತ್ತು ಹಿಂದೂ ದೇವತೆಯಾಗಿ ಪೂಜಿಸಲ್ಪಟ್ಟಿದ್ದಾಳೆ. ಈ ರೀತಿ ಜೋಡಿ ಮಾಡಿರುವುದು ಹಿಂದೂಗಳಿಗೆ ಅಗೌರವವೆಂದು ಪರಿಗಣಿಸಲಾಗಿದೆ ಎಂದು VHP ವಾದಿಸಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು.