ಬೆಂಗಳೂರು: ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ನಡೆದ ಹಿಂಸಾಚಾರದ ಬೆನ್ನಲ್ಲೇ ಈದ್ ಮಿಲಾದ್ ಆಚರಣೆಗೆ ಬೆಂಗಳೂರು ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಬೆಂಗಳೂರು ನಗರದಲ್ಲಿ ಈದ್ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕೆಲ ಸೂಚನೆಗಳನ್ನು ಪೊಲೀಸರು ಹೊರಡಿಸಿದ್ದಾರೆ. ಒಂದು ವೇಳೆ ನಿಬಂಧನೆಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಮಾರ್ಗಸೂಚಿಯಲ್ಲೇನಿದೆ?
• ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
• ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು.
• ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
• ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚ್ ಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
• ಮೆರವಣಿಗೆಯ ಸಮಯದಲ್ಲಿ ಆಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
• ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿನಂದಿಸುವ ಸಾಮಗ್ರಿಯನ್ನು ಇಟ್ಟುಕೊಂಡಿರಬೇಕು.
• ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
• ಹಿರಿಯ ನಾಗಕರಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಬೇಕು.
• ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿ ಪಡೆದುಕೊಳ್ಳಬೇಕು.