ಬೆಂಗಳೂರು: ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಐದು ಗ್ಯಾರೆಂಟಿ ( ಭರವಸೆ ) ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಯಾವುದೇ ಕಠಿಣ ಷರತ್ತುಗಳನ್ನು ವಿಧಿಸದೆ ಸಮ್ಮತಿಸಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗ್ಯಾರೆಂಟಿಗಳ ಜಾರಿ ಕುರಿತಂತೆ ಮಾಹಿತಿ ನೀಡಿದ್ದಾರೆ.
ಗೃಹ ಜ್ಯೋತಿ ಯೋಜನೆ :
ರಾಜ್ಯದ ಗೃಹ ಬಳಕೆದಾರರಿಗೆ ಗರಿಷ್ಠ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಈ ಯೋಜನೆ ಜುಲೈ 1ರಿಂದ ಬಳಕೆಯಾಗುವ ವಿದ್ಯುತ್ ಗೆ ಅನ್ವಯವಾಗುತ್ತದೆ. ಅಂದರೆ, 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರು ಆಗಸ್ಟ್ 1 ರಿಂದ ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲ. ಆದರೆ, ಜುಲೈ 1 ರವರೆಗಿನ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುವಂತಿಲ್ಲ. ಸಂಪೂರ್ಣವಾಗಿ ಪಾವತಿಸಬೇಕು.
ಮತ್ತೊಂದು ವಿಚಾರ ಎಂದರೆ, ಗರಿಷ್ಠ 200 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರೂ, ಫಲಾನುಭವಿಗಳ ವಿದ್ಯುತ್ ಬಳಕೆಯ ಹಿಂದಿನ 12 ತಿಂಗಳ ಸರಾಸರಿಯನ್ನು ಲೆಕ್ಕಹಾಕಿ ಅದಕ್ಕೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್ ಗಳನ್ನಾಗಿ ಕೂಡಿ ಮನೆಯ ಬಳಕೆಯ ಪ್ರಮಾಣವನ್ನು ನಿಗದಿಪಡಿಸಲಾಗುವುದು. ಉದಾಹರಣೆಗೆ, ಒಂದು ಮನೆಯ ವಿದ್ಯುತ್ ಬಿಲ್ ನ ಒಂದು ವರ್ಷದ ಸರಾಸರಿ 60 ಯೂನಿಟ್ ಇದ್ದರೆ, ಹೆಚ್ಚುವರಿ ಆರು ಯೂನಿಟ್ ಸೇರಿಸಿ, ಬಳಕೆಯ ಪ್ರಮಾಣವನ್ನು 66 ಯೂನಿಟ್ ಎಂದು ನಿಗದಿಪಡಿಸಲಾಗುವುದು.
ಅಂತೆಯೇ, 200 ಯೂನಿಟ್ ವರೆಗೂ ಉಚಿತ ಎಂದು ಆ ಕುಟುಂಬದವರು 66 ಯೂನಿಟ್ ಗಳಿಗಿಂತಲೂ ಹೆಚ್ಚುವರಿ ವಿದ್ಯುತ್ ಬಳಕೆ ಮಾಡುವಂತಿಲ್ಲ.
ಅದೇ ರೀತಿ ವಿದ್ಯುತ್ ಬಳಕೆಯ ವಾರ್ಷಿಕ ಸರಾಸರಿ 150 ಯೂನಿಟ್ ಇದ್ದವರು, 165 ಯೂನಿಟ್ ವರೆಗೂ ವಿದ್ಯುತ್ ಬಳಸಬಹುದು.
ವಿದ್ಯುತ್ ಬಳಕೆಯ ವಾರ್ಷಿಕ ಸರಾಸರಿ ಪ್ರಮಾಣ 199 ಯೂನಿಟ್ ಇದ್ದರೆ, ಬಳಕೆಯ ಪ್ರಮಾಣದ ಮಿತಿ ಗರಿಷ್ಠ 200 ಯೂನಿಟ್ ಗೆ ಸೀಮಿತ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಗೃಹ ಲಕ್ಷ್ಮೀ ಯೋಜನೆ ;
ಮನೆಯೊಡತಿಗೆ ಪ್ರತಿ ಮಾಹೆ 2000 ರೂ. ನೀಡುವ ಈ ಯೋಜನೆ ಬಡತನ ರೇಖೆಗಿಂತಲೂ ಕೆಳಗಿರುವ ( ಬಿ ಪಿ ಎಲ್) ಕುಟುಂಬಗಳಿಗೆ ಮಾತ್ರವಲ್ಲ, ಬಡತನ ರೇಖೆಗಿಂತಲೂ ಮೇಲಿನ ( ಎಪಿಎಲ್ ) ಕುಟುಂಬದವರಿಗೂ ಅನ್ವಯ.
ವೃದ್ಧಾಪ್ಯ ವೇತನ, ವಿಧವಾ ಮಾಸಾಶನ, ವಿಭಿನ್ನ ಚೇತನರು ಹಾಗೂ ವಿಶೇಷ ಚೇತನರ ಪಿಂಚಣಿ ಒಳಗೊಂಡಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಯಾವುದೇ ಮಾಸಾಶನ ಪಡೆಯುತ್ತಿದ್ದರೂ, ಈ ಯೋಜನೆಯಡಿ ಮನೆಯೊಡತಿ 2000 ರೂ ಮಾಸಾಶನ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಸನ್ನಿಹಿತದಲ್ಲಿಯೇ ಈ ಯೋಜನೆಗೆ ಸಲ್ಲಿಸಬೇಕಾದ ಅರ್ಜಿ ಕುರಿತಂತೆ ತಂತ್ರಾಂಶ ( ಸಾಫ್ಟ್ ವೇರ್ ) ಅಭಿವೃದ್ಧಿಪಡಿಸಲಾಗುತ್ತದೆ.
ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಜೂನ್ 15 ರಿಂದ ಜುಲೈ 15 ರೊಳಗೆ ಆನ್ ಲೈನ್ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಅರ್ಜಿಯಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವುದು ಕಡ್ಡಾಯ.
ಸ್ವೀಕೃತ ಅರ್ಜಿಗಳನ್ನು ಜುಲೈ 15 ರಿಂದ ಆಗಸ್ಟ್ 15 ರವರೆಗೆ ಪರಿಶೀಲಿಸಿ, ನೇರ ಹಣ ವರ್ಗಾವಣಾ ವ್ಯವಸ್ಥೆಯಲ್ಲಿ ವಿಲೀನಗೊಳಿಸಿ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ 2000 ರೂ ಮೊತ್ತವನ್ನು ಜಮಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.
ಅನ್ನಭಾಗ್ಯ ಯೋಜನೆ :
ಜೂನ್ ಮಾಹೆಯ ಆಹಾರ ಧಾನ್ಯಗಳು ಈಗಾಗಲೇ ಎತ್ತುವಳಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಉಗ್ರಾಣದಲ್ಲಿ ಆಹಾರ ಧಾನ್ಯಗಳು ಲಭ್ಯವಿಲ್ಲದೇ ಇರುವ ಹಿನ್ನೆಲೆಯಲ್ಲಿ, ಬಡತನ ರೇಖೆಗಿಂತಲೂ ಕೆಳಗಿರುವ ಪಡಿತರ ಚೀಟಿ ಹಾಗೂ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ ಹತ್ತು ಕೆ ಜಿ ಯಂತೆ ಆಹಾರ ಧಾನ್ಯ ಒದಗಿಸುವ ಈ ಯೋಜನೆಯನ್ನು ಜುಲೈ 1 ರಿಂದ ಅನುಷ್ಠಾನಕ್ಕೆ ತರಲಾಗುವುದು.
ಕೇಂದ್ರ ಸರ್ಕಾರದಿಂದ ಪೂರೈಕೆಯಾಗುವ ಆಹಾರ ಧಾನ್ಯಗಳು ಕೊರತೆ ಎದುರಾದಲ್ಲಿ ಭಾರತ ಆಹಾರ ನಿಗಮ (ಎಫ್ ಸಿ ಐ ), ಭಾರತ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ( ನ್ಯಾಫೆಡ್ ) ಹಾಗೂ ಭಾರತ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ( ಎನ್ ಸಿ ಸಿ ಎಫ್ ) ದಿಂದ ಅವಶ್ಯಕತೆ ಇರುವ ಆಹಾರ ಧಾನ್ಯಗಳನ್ನು ಖರೀದಿಸಲಾಗುವುದು ಎಂದರು.
ಶಕ್ತಿ ಯೋಜನೆ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಒಳಗೊಂಡಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳ ಸಾಮಾನ್ಯ, ತಡೆ-ರಹಿತ ಹಾಗೂ ವೇಗ ಧೂತಬಸ್ ಗಳಲ್ಲಿ ವಿದ್ಯಾರ್ಥಿನಿಯರೂ ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಸೇವಾ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಗೆ ಜೂನ್ 11 ರಂದು ಚಾಲನೆ.
ಎಸಿ ಯಲ್ಲಿ ಓಸಿ ಇಲ್ಲ !
ರಾಜ್ಯದ ಮಹಿಳೆಯರು ನಗರ ಸಾರಿಗೆ ಬಸ್ ಗಳಲ್ಲಿ ಮಾತ್ರವಲ್ಲದೆ ಬೆಂಗಳೂರಿನಿಂದ ಬೀದರ್ ವರೆಗೆ ಎಲ್ಲಿ ಬೇಕಾದರಲ್ಲಿಗೆ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಹೊರ ರಾಜ್ಯದ ತಿರುಪತಿ, ತಿರುವನಂತಪುರಂ, ಹೈದರಾಬಾದ್, ಚೆನ್ನೈ ಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ. ಅಂತೆಯೇ, ಹವಾನಿಯಂತ್ರಿತ ಹಾಗೂ ಸುವಿಹಾರಿ ಬಸ್ ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ.
ಪುರುಷರಿಗೆ ಆಸನ ಮೀಸಲು !
ವಿಶೇಷ ಎಂದರೆ ಇನ್ನು ಮುಂದೆ ರಾಜ್ಯ ಸರ್ಕಾರಿ ಸ್ವಾಮ್ಯದ ಎಲ್ಲಾ ಬಸ್ ಗಳಲ್ಲಿನ ಶೇಕಡಾ 50 ರಷ್ಟು ಆಸನಗಳ ಮೀಸಲು.
ಹಣ ತೆತ್ತು ಪ್ರಯಾಣಿಸುವ ಗಂಡಸರಿಗೂ ನ್ಯಾಯ ಒದಗಿಸಬೇಕಲ್ಲವೇ ? ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಂತೆ ಪತ್ರಿಕಾ ಗೋಷ್ಠಿಯಲ್ಲಿ ನೆರೆದಿದ್ದವರೆಲ್ಲರೂ ನಗೆ ಬುಗ್ಗೆ ಚಿಮ್ಮಿತು.
ಯುವ ನಿಧಿ ಯೋಜನೆ :
2022-23 ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ಪಡೆದವರು, ತಮ್ಮ ಪದವಿ ಪಡೆದ ಆರು ತಿಂಗಳಲ್ಲಿ ಉದ್ಯೋಗ ಲಭಿಸದಿದ್ದರೆ, ಅಂತಹ ನಿರುದ್ಯೋಗಿ ಪದವೀಧರರು ಮೊದಲ ಎರಡು ವರ್ಷಗಳು ಅಥವಾ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯುವವರೆಗೆ ಮಾಸಿಕ 3000 ರೂ ಭತ್ಯೆ ಹಾಗೂ ಡಿಪ್ಲೋಮಾ ಹೊಂದಿರುವವರು ಮಾಸಿಕ 1500 ರೂ ಭತ್ಯೆ ಪಡೆಯಲು ಅರ್ಹರು.
ಈ ಯೋಜನೆಯ ಲಾಭ ಪಡೆಯಲು ಜಾತಿ, ಧರ್ಮ ಹಾಗೂ ಲಿಂಗ ತಾರತಮ್ಯದ ನಿರ್ಭಂಧ ಇರುವುದಿಲ್ಲ.
ಈ ಗ್ಯಾರೆಂಟಿಗಳ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಬೊಕ್ಕಸಕ್ಕೆ ಎಷ್ಟು ಹೊರೆಯಾಗಲಿದೆ ? ಈ ಯೋಜನೆಗಳ ಜಾರಿಗೆ ಅಗತ್ಯವಿರುವ ಹಣವನ್ನು ಹೇಗೆ ಹೊಂದಿಸುವಿರಿ ? ಎಂಬ ಮಾಧ್ಯಮದವರ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಸವಿವರವಾಗಿ ಉತ್ತರಿಸುವುದಾಗಿ ಸಿದ್ದರಾಮಯ್ಯ ಅವರು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸೇರಿದಂತೆ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.