ಜನಾರೋಗ್ಯವೇ ರಾಷ್ಟ್ರಶಕ್ತಿ 2021 ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ

Prasthutha|

ಮೈಸೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಾರ್ಷಿಕವಾಗಿ ನಡೆಸುವ ರಾಷ್ಟ್ರಮಟ್ಟದ ಆರೋಗ್ಯ ಜಾಗೃತಿ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ಅಭಿಯಾನಕ್ಕೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು. ಮಿಲಾದ್ ಗೇಟ್ ನಿಂದ ಪ್ರಾರಂಭಗೊಂಡು ಪುರಭವನ ಮೈದಾನದಲ್ಲಿ ಕೊನೆಗೊಂಡ ಆರೋಗ್ಯ ಜಾಗೃತಿ ಮ್ಯಾರಥಾನ್  ಓಟಕ್ಕೆ ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಶರೀಫ್ ಬಜ್ಪೆ ಹಸಿರು ನಿಶಾನೆ ತೋರುವ ಮೂಲಕ  ಅಭಿಯಾನಕ್ಕೆ ಚಾಲನೆ ನೀಡಿದರು.

- Advertisement -

ಪುರಭವನ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಸ್ಟೇ ಫಿಟ್ ವಿಡಿಯೋ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶ ಇಂದು ಗಂಭೀರ ಅರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಜನರು ಮಧುಮೇಹ, ಹೃದ್ರೋಗದಂತಹ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಅಪೌಷ್ಟಿಕತೆ ಮಕ್ಕಳ ಪ್ರಾಣ ಬಲಿ ಪಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾಗರಿಕನ ಆರೋಗ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ದುರದೃಷ್ಟವಶಾತ್, ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸುತ್ತಿರುವ ಶೇಕಡಾವಾರು ಮೊತ್ತವು ನೆರೆಯ ದೇಶಗಳಿಗಿಂತ ಅತ್ಯಂತ ಕಡಿಮೆ. ಕೋವಿಡ್ ಕಾಲದಲ್ಲಿ ಆಸ್ಪತ್ರೆ, ಹಾಸಿಗೆ, ಆಮ್ಲಜನಕದ ಕೊರತೆಯಿಂದಾಗಿ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. ಇದು ಆರೋಗ್ಯ ಕ್ಷೇತ್ರದ ಕುರಿತ ಸರಕಾರದ ಗಂಭೀರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

- Advertisement -

ಬದಲಾದ ಜೀವನ ಶೈಲಿಯು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದುದರಿಂದ ಜನರು ಸ್ವತಃ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕು. ಅದರೊಂದಿಗೆ ನಾಗರಿಕರ ನೆಮ್ಮದಿಯ, ಶಿಸ್ತುಬದ್ಧ ಜೀವನ ಮತ್ತು ಸಾಮಾಜಿಕ ಶಾಂತಿಗೆ ಆತ್ಮ ರಕ್ಷಣಾ ಕಲೆಗಳು ಅತೀ ಅಗತ್ಯವಾಗಿವೆ. ತಮ್ಮ ಮೇಲಾಗುತ್ತಿರುವ ಅನ್ಯಾಯ, ಆಕ್ರಮಣವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ಆತ್ಮ ರಕ್ಷಣಾ ಕಲೆಗಳು ಸಹಕಾರಿಯಾಗಿವೆ. ಆರೋಗ್ಯವಂತ ಜನರು ಮಾತ್ರವೇ ಸುಭದ್ರ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಯಾಸಿರ್ ಹಸನ್ ಸಂದರ್ಭೋಚಿತವಾಗಿ ನುಡಿದರು. 

ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ  ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಶರೀಫ್ ಬಜ್ಪೆ, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ತಫ್ಸೀರ್, ಮೈಸೂರು ಜಿಲ್ಲಾಧ್ಯಕ್ಷ ಬಿಲಾಲ್ ಶರೀಫ್ ಉಪಸ್ಥಿತರಿದ್ದರು.

ಈ ವೇಳೆ ಆರೋಗ್ಯ ಜಾಗೃತಿ ಕಾರ್ಯಕ್ರಮ, ಆತ್ಮ ರಕ್ಷಣಾ ಕಲೆಗಳು ಮತ್ತು ಯೋಗ ಪ್ರದರ್ಶನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

‘ಜನಾರೋಗ್ಯವೇ ರಾಷ್ಟ್ರ ಶಕ್ತಿ 2021’ ರಾಷ್ಟ್ರೀಯ ಅಭಿಯಾನವು ನವೆಂಬರ್ 16ರಿಂದ 30ರ ವರೆಗೆ ನಡೆಯಲಿದೆ. ಪಾಪ್ಯುಲರ್ ಫ್ರಂಟ್ ಪ್ರತಿ ವರ್ಷ ಈ ಅಭಿಯಾನವನ್ನು ನಡೆಸುತ್ತಾ ಬಂದಿದ್ದು, ಇದು ಜನಸಾಮಾನ್ಯರಲ್ಲಿ ಆರೋಗ್ಯ ಮತ್ತು ಆರೋಗ್ಯಕರ ಜೀವನ ಶೈಲಿಗೆ ಸಂಬಂಧಿಸಿದಂತೆ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆ. ಅಭಿಯಾನದ ಸಮಯದಲ್ಲಿ ದೇಶಾದ್ಯಂತ ರಕ್ತದಾನ ಶಿಬಿರಗಳು, ಮ್ಯಾರಥಾನ್ ಓಟ, ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮಗಳು, ಜಾಥಾ ಮತ್ತು ಸಾರ್ವಜನಿಕ ಆರೋಗ್ಯ ತಾಲೀಮು ಪ್ರದರ್ಶನದಂತಹ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp