ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಳ್ಳಂದೂರು ಐಟಿ ವಲಯ ಸೇರಿದಂತೆ ನಗರದ ಪೂರ್ವ, ದಕ್ಷಿಣ ಮತ್ತು ಮಧ್ಯ ಭಾಗದ ಹಲವಾರು ಆರ್ಟಿರಿಯಲ್ ರಸ್ತೆಗಳು ಜಲಾವೃತಗೊಂಡಿವೆ. ಹವಾಮಾನ ಇಲಾಖೆಯ ಪ್ರಕಾರ, ನಗರದ ಉತ್ತರ ಭಾಗದ ರಾಜಮಹಲ್ ಗುಟ್ಟಹಳ್ಳಿಯಲ್ಲಿ 59 ಮಿ.ಮೀ ಮಳೆಯಾಗಿದ್ದು, ಈಗಾಗಲೇ ಹವಾಮಾನ ಕಚೇರಿ ಹಳದಿ ಎಚ್ಚರಿಕೆಯನ್ನು ನೀಡಿದೆ. ಇದು ಭಾರಿ ಮಳೆಯ ಸೂಚಕವಾಗಿದ್ದು, ಮುಂದಿನ ಮೂರು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತಗ್ಗು ಪ್ರದೇಶಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ತೆರೆದ ಮ್ಯಾನ್ ಹೋಲ್ ಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ಮತ್ತು ಪಾರ್ಕಿಂಗ್ ಮಾಡಲಾದ ವಾಹನಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಸಂಜೆ 7.30 ರ ಸುಮಾರಿಗೆ ಮಳೆ ಪ್ರಾರಂಭವಾದ ಕಾರಣ ಮನೆಗೆ ವಾಪಸಾಗುವವರು ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆಯಬೇಕಾಗಿ ಬಂದಿದೆ.
ಕಳೆದ ತಿಂಗಳು, ಸತತ ಮೂರು ದಿನಗಳ ಕಾಲ ಮಳೆಯ ನಂತರ ನಗರವು ಅಭೂತಪೂರ್ವ ಪ್ರವಾಹದಿಂದ ತತ್ತರಿಸಿದ್ದು, ಇದು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು. ಜಾಗತಿಕ ಐಟಿ ಕಂಪನಿಗಳು ಇರುವ ನಗರದ ಕೆಲವು ಭಾಗಗಳು ನೀರಿನಲ್ಲಿ ಮುಳುಗಿ ಹೋಗಿದ್ದವು, ವಸತಿ ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದವು ಮತ್ತು ನೀರು ಮತ್ತು ವಿದ್ಯುತ್ ಮಾರ್ಗಗಳು ಸ್ಥಗಿತಗೊಂಡವು. ಕೆಲವು ಐಷಾರಾಮಿ ವಸತಿ ವಸಾಹತುಗಳಲ್ಲಿನ ನಿವಾಸಿಗಳು ಟ್ರಾಕ್ಟರ್ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಲಾಯನವಾಗುತ್ತಿದ್ದರು.
ಅದರಿಂದ ಸುಧಾರಿಸಿಕೊಳ್ಳಲು ನಗರಕ್ಕೆ ಸ್ವಲ್ಪ ಸಮಯ ಹಿಡಿಯಿತು, ಆದರೆ ಇದೀಗ ಮತ್ತೆ ಅಬ್ಬರಿಸಿದ ಮಳೆಯಿಂದಾಗಿ ಬೆಂಗಳೂರು ಸಂಪೂರ್ಣ ತತ್ತರಿಸಿ ಹೋಗುವ ಸಾಧ್ಯತೆ ಕಂಡು ಬರುತ್ತಿದೆ.