ರಾಜ್ಯದಲ್ಲಿ ಮಳೆ ಅಬ್ಬರ: ಕೊಡಗು,ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಇಂದು ರಜೆ

Prasthutha|

ಕೊಡಗು: ಕೊಡಗು, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮುಂತಾದ ಜಿಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆ ಶಾಲಾ ಪಿಯು ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜೆಲ್ಲೆಯ ಎಲ್ಲಾ ಅಂಗನವಾಡಿ, ಶಾಶೆ, ಪಿಯು ಕಾಲೇಜುಗಳಿಗೆ ದಿನಾಂಕ 26-7-2024 ರಂದು ರಜೆ ಘೋಷಿಸಲಾಗಿದೆ.

- Advertisement -

ಕೊಡಗಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಅಧಿಕಗೊಂಡಿದೆ. ಇದರಿಂದ ಸಂಚಾರಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದ್ದು ಅಲ್ಲಲ್ಲಿ ಮರ ಗಿಡಗಳು ನೆಲಕ್ಕಚ್ಚುತ್ತಿವೆ. ಮಳೆಯೊಂದಿಗೆ ಗಾಳಿ ಕೂಡ ಜೋರಾಗಿದ್ದು ವಿದ್ಯುತ್ ಕಂಬಗಳು ಬೀಳುತ್ತಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೀಗಾಗಿ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದೆ.

ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ

- Advertisement -

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದರಿಂದ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್‌.ಪರ ತಾಲೂಕಿನ ಅಂಗನವಾಡಿ, ಪ್ರಾಥಮಿಕ , ಪ್ರೌಢ ಶಾಲೆಗಳಿಗೆ ಜುಲೈ 26 ಶುಕ್ರವಾರ ಒಂದು ದಿನ ಮಾತ್ರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಿಸಿದ್ದಾರೆ.

ಹಾವೇರಿ, ಧಾರವಾಡದಲ್ಲಿ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ

ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದಾಗಿ ಅಂಗನವಾಡಿ ಕೇಂದ್ರಗಳ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳ ಆರೋಗ್ಯ/ಸುರಕ್ಷತೆಯ ಹಿತದೃಷ್ಟಿಯಿಂದ ದಿನಾಂಕ ಜುಲೈ 26 ಹಾಗೂ ಜುಲೈ 27ರವರೆಗೆ ಎರಡು ದಿನ ರಜೆ ಘೋಷಿಸಿಲಾಗಿದೆ.

ಹಾವೇರಿಯಲ್ಲಿ ಸತತವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಹಾಗೂ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾವೇರಿ ಇವರ ಕೋರಿಕೆಯಂತೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ರಜೆಯನ್ನು ಘೋಷಿಸಿಲಾಗಿದೆ.

ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ಶೀತ ಗಾಳಿ ಬೀಸುತ್ತಿರುವದರಿಂದ ಜುಲೈ.25ರಂದು ಇದ್ದ ರಜೆಯನ್ನು ಜುಲೈ 26 ರಂದೂ ಮುಂದುವರೆಸಲಾಗಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿದ್ದಾರೆ.

ಬೆಳಗಾವಿಯಲ್ಲೂ ಮಳೆ ಅಬ್ಬರ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಗೋಕಾಕ, ಮೂಡಲಗಿ, ರಾಯಬಾಗ ಮತ್ತು ಹುಕ್ಕೇರಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಆದೇಶಿಸಿದ್ದಾರೆ

ಹಾಸನ:ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯ ಆರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್‌.ಕೆ.ಪಾಂಡು ಆದೇಶಿಸಿದ್ದಾರೆ.
ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡು ಹಾಗು ಹೊಳೆನರಸೀಪುರ ಶಾಲೆಗಳಿಗೆ ರಜೆ ಘೋಷಿಸಿದ್ದು, ಶುಕ್ರವಾರದ ಪಾಠಗಳನ್ನು ಆ. 24ರಂದು ಸರಿದೂಗಿಸಿಕೊಳ್ಳುವಂತೆ ಸೂಚಿಸಲಾಗಿದೆ.



Join Whatsapp