ಕರಾವಳಿಯಲ್ಲಿ ಭಾರಿ ಮಳೆ: ಕೆಲವೆಡೆ ಕೃತಕ ನೆರೆ

Prasthutha|

►ಇನ್ನು ಎರಡು ದಿನ ಮಳೆ ಸಾಧ್ಯತೆ

- Advertisement -

ಮಂಗಳೂರು: ಕರಾವಳಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಮಳೆ ತೀವ್ರಗೊಂಡಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿತ್ತು.

ಸೋಮವಾರ ಮಧ್ಯಾಹ್ನದ ಬಳಿಕ ಕರಾವಳಿಯ ಬಹುತೇಕ ಎಲ್ಲೆಡೆ ಒಮ್ಮೆಲೆ ಬಿರುಸಿನ ಮಳೆ ಆರಂಭವಾಗಿದ್ದು, ಸುಳ್ಯ, ಬೆಳ್ತಂಗಡಿ, ಕಾರ್ಕಳ, ಕುಂದಾಪುರ ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕುಗಳು ಮತ್ತು ಉಭಯ ಜಿಲ್ಲೆಗಳ ಇತರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ.

- Advertisement -

ಬಂಟ್ವಾಳ ತಾಲೂಕಿನಾದ್ಯಂತ ಸೋಮವಾರ ಸುರಿದ ಮಳೆಯ ಪರಿಣಾಮ ಬಿ.ಸಿ. ರೋಡು ಸೇರಿದಂತೆ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಸಂಚಾರಕ್ಕೆ ತೊಂದರೆಯುಂಟಾಯಿತು. ರಸ್ತೆ ಕಾಮಗಾರಿಯಿಂದಾಗಿ ಮೆಲ್ಕಾರ್, ಕಲ್ಲಡ್ಕ, ಮಾಣಿ ಯಲ್ಲಿ ಹೆದ್ದಾರಿಯುದ್ದಕ್ಕೂ ನೀರು ತುಂಬಿತ್ತು.

ಸುರತ್ಕಲ್, ಪಣಂಬೂರು ಸುತ್ತಮುತ್ತ ಭಾರೀ ಮಳೆಗೆ ರಸ್ತೆಯಲ್ಲೇ ಮಳೆ ನೀರು ಹರಿಯಿತು. ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೇ ಕೆಳಸೇತುವೆ, ಸುರತ್ಕಲ್ ಚರ್ಚ್ ರೋಡ್ ಸಹಿತ ವಿವಿಧೆಡೆ ರಸ್ತೆಗಳು ಜಲಾವೃತವಾದವು.

ಕೈಕಂಬ ಪೊಳಲಿ ದ್ವಾರದ ಬಳಿ ರಸ್ತೆಯಲ್ಲೇ ಮಳೆ ನೀರು ತುಂಬಿ ಕೃತಕ ನೆರೆ ಸ್ಥಿತಿ ಇತ್ತು. ಹೆದ್ದಾರಿ ಕಾಮಗಾರಿಗಾಗಿ ಅಗೆದಿರುವ ಪರಿಣಾಮ ಕಲ್ಲಡ್ಕದಲ್ಲಿ ಮನೆಯಂಗಳಕ್ಕೂ ನೀರು ನುಗ್ಗಿತ್ತು.

ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಮಂಗಳವಾರ (17-05-2022) ದಿಂದ ಗುರುವಾರ (19-05-2022) ವರೆಗೆ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ನದಿ, ಸಮುದ್ರಗಳಿಗೆ ಇಳಿಯದಂತೆ ಮೀನುಗಾರರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಸಿದೆ.

ಮೇ18 ರ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ.



Join Whatsapp