ರಾಜ್ಯಾದ್ಯಂತ ತೀವ್ರ ಮಳೆ ಹಿನ್ನೆಲೆ: ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಎಂ ಬೊಮ್ಮಾಯಿ ಸೂಚನೆ

Prasthutha|

ಬೆಂಗಳೂರು: ಕೊಡಗು, ಮಲೆನಾಡು ಕರಾವಳಿ, ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯನಿರತವಾಗುವಂತೆ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರವಾರ, ಉಡುಪಿ, ಮಂಗಳೂರಿನಲ್ಲಿ ಆಗುತ್ತಿರುವ ಕಡಲ ಕೊರೆತಕ್ಕೆ ತಾತ್ಕಾಲಿಕ ಪರಿಹಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರಿನ ಎನ್ ಡಿಆರ್ ಎಫ್ ತಂಡವನ್ನು ಕೊಡಗಿಗೆ ನೇಮಿಸಲಾಗುತ್ತಿದೆ. ಮಂಗಳೂರಿನಲ್ಲಿ ಎನ್ ಡಿಆರ್ ಎಫ್ ತಂಡವಿದ್ದು ಎಸ್ ಡಿಆರ್ ಎಫ್ ತಂಡ ಕೂಡ ಇರುತ್ತದೆ. ಕಾರವಾರ ಮತ್ತು ಉಡುಪಿಯಲ್ಲಿ ಕೂಡ ನೇಮಿಸಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಭೂಕುಸಿತವಾಗುವ ಪ್ರದೇಶಗಳಲ್ಲಿ ಜನವಸತಿಯಿದ್ದರೆ ಅಲ್ಲಿರುವವರನ್ನು ಸ್ಥಳಾಂತರಿಸಲು ಮತ್ತು ರಸ್ತೆಗಳನ್ನು ಸಹ ತೆರವು ಮಾಡಲು ಸೂಚಿಸಲಾಗಿದೆ. ಸಿಬ್ಬಂದಿ, ಕಾರ್ಮಿಕರು ಅದಕ್ಕೆ ಯಂತ್ರಗಳು, ಸಾಧನಗಳನ್ನು ಸಿದ್ಧತೆ ಮಾಡಿಕೊಂಡು ಮಳೆಯ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದಾರೆ, ಮಳೆ ಹೆಚ್ಚಾಗಿ ಇರುವ ಕಡೆ ಹಾನಿಯಾಗಿರುವ ಕಡೆಯೆಲ್ಲಾ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಹೋಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

Join Whatsapp