ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಹಾವೇರಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ವ್ಯಾಪಕ ಹಾನಿಗಳು ಉಂಟಾಗಿವೆ.
ಸತತವಾಗಿ ಸುರಿಯುತ್ತಿರುವ ಮಳೆಯ ತೀವ್ರತೆಗೆ ರಾಜ್ಯದ ವಿವಿಧೆಡೆ 1600 ಕ್ಕೂ ಅಧಿಕ ಮನೆಗಳು ಭಾಗಶಃ ಮತ್ತು ಪೂರ್ಣ ಹಾನಿಗೊಳಗಾಗಿವೆ. ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ 567 ಮನೆಗಳು ಹಾನಿಗೊಳಗಾಗಿದ್ದರೆ, ಚಿಕ್ಕಬಳ್ಳಾಪುರ 360, ಚಾಮರಾಜನಗರ, 349, ಚಿತ್ರದುರ್ಗ 104, ಬಳ್ಳಾರಿ-ವಿಜಯನಗರದಲ್ಲಿ- 85, ದಾವಣಗೆರೆಯಲ್ಲಿ 52 ಮನೆಗಳು ಮಳೆ ವಿಕೋಪಕ್ಕೆ ತುತ್ತಾಗಿರುವುದಾಗಿ ವರದಿಯಾಗಿದೆ.
ಇನ್ನು ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು 23 ಕುರಿಗಳು ಮೃತಪಟ್ಟಿವೆ. ಅಲ್ಲದೇ ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಕೋಳಿಫಾರಂ ಒಂದು ಜಲಾವೃತವಾಗಿ 2 ಸಾವಿರ ಕೋಳಿಗಳು ನೀರುಪಾಲಾಗಿವೆ. ತುಮಕೂರಿನ ಆಹಾರ ಸಂಸ್ಕರಣಾ ಫ್ಯಾಕ್ಟರಿಯ .70 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿವೆ.
ಕೊರಟಗೆರೆ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಬೈಕ್ ಒಂದು ಕೊಚ್ಚಿ ಹೋಗಿದ್ದು ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಉತ್ತರ ಭಾಗದ ಕೋಟೆಯಲ್ಲಿನ ಒಂದು ವೃತ್ತಾಕಾರದ ಕೊತ್ತಲ(ಬುರುಜು) ಶುಕ್ರವಾರ ಬೆಳಗಿನ ಜಾವ ಸಂಪೂರ್ಣವಾಗಿ ನೆಲಕ್ಕೆ ಉರುಳಿದ ಘಟನೆ ನಡೆದಿದೆ.