ಮಧ್ಯಪ್ರದೇಶದಲ್ಲಿ ಗುಂಪು ಘರ್ಷಣೆ | ಪೊಲೀಸ್ ಸರ್ಪಗಾವಲು

Prasthutha|

ಭೋಪಾಲ್: ಮಧ್ಯಪ್ರದೇಶದ ರಾಜ್ ಗಢದ ಕರೇಡಿ ಎಂಬಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಬುಧವಾರ ತಡರಾತ್ರಿ ಉಭಯ ತಂಡಗಳ ನಡುವೆ ಘರ್ಷಣೆ ಮತ್ತು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯ ವೇಳೆ ಒಂದು ಗುಂಪು, ಮತ್ತೊಂದು ಗುಂಪಿನ ಸದಸ್ಯರ ಮೇಲೆ ದೊಣ್ಣೆ ಮತ್ತು ರಾಡ್ ಗಳಿಂದ ಹಲ್ಲೆ ನಡೆಸಿದ್ದು, ಇದರಿಂದ ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿವೆ. ಘರ್ಷಣೆಯಲ್ಲಿ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷ್ ದೀಕ್ಷಿತ್ ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಗಲಭೆಪೀಡಿತ ಸ್ಥಳಕ್ಕೆ ವಿಶೇಷ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ಕರೆಯಿಸಲಾಗಿದ್ದು, ಅಲ್ಲಿ ನಿಗಾವಹಿಸಿದ್ದಾರೆ. ಪೊಲೀಸ್ ಉಪವಿಭಾಗಾಧಿಕಾರಿ (SDOP) ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಕೂಡ ಅಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಶರ್ಮಾ ತಿಳಿಸಿದ್ದಾರೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



Join Whatsapp