ಮಗುವಿನ‌ ಅಪರೂಪದ ಕಾಯಿಲೆಗೆ ತಂದೆಯೇ ಮದ್ದು‌ ಕಂಡುಹಿಡಿದ ಹೃದಯಸ್ಪರ್ಷಿ ಘಟನೆ!

Prasthutha|

ಚೀನಾ: ಸಾವಿನಂಚಿನಲ್ಲಿರುವ ಹಸುಗೂಸಿಗಾಗಿ ಅಪ್ಪನೇ ಔಷಧ ಕಂಡುಹಿಡಿದ ಹೃದಯಸ್ಪರ್ಶಿ ಘಟನೆ ಚೀನಾದಲ್ಲಿ ನಡೆದಿದ್ದು ವಿಶ್ವದಾದ್ಯಂತ ಮೆಚ್ಚುಗೆ, ಆಶ್ಚರ್ಯಕ್ಕೆ ಕಾರಣವಾಗಿದೆ. ಮೆಂಕೆಸ್ ಸಿಂಡ್ರೋಮ್ ಎಂಬ ಅಪರೂಪದ ಆನುವಂಶಿಕ ಕಾಯಿಲೆಯೊಂದರಿಂದ ಮೂರು ವರ್ಷದ ಮಗು ಹುಟ್ಟಿನಿಂದಲೂ ಬಳಲುತ್ತಿತ್ತು. ಮಗುವಿಗೆ ಚಿಕಿತ್ಸೆ ನೀಡಲು ಔಷಧ ದೇಶದ ಎಲ್ಲಿಯೂ ಲಭ್ಯವಿರಲಿಲ್ಲ. ಕೋವಿಡ್ ನಿರ್ಬಂಧಗಳ ಕಾರಣ ವಿದೇಶಕ್ಕೆ ತೆರಳಲು ಅವಕಾಶವಿರಲಿಲ್ಲ.

- Advertisement -

ಆಗ ‘ಅನಿವಾರ್ಯತೆಗಳು ಆವಿಷ್ಕಾರದ ಮೂಲ’ ಎಂಬಂತೆ ಆ ಮಗುವಿನ ತಂದೆ ತಾನೇ ಅಧ್ಯಯನ ಮಾಡಿ ಮನೆಯಲ್ಲೇ ಔಷಧ ತಯಾರು ಮಾಡಿದ್ದಾರೆ. ಈ ಘಟನೆ ನಿಜವಾಗಿಯೂ ಮನಕಲಕುತ್ತಿದೆ. ಕ್ಸು ಓದಿರುವುದು ಕೇವಲ ಎಂಟನೇ ತರಗತಿ. ಸಣ್ಣ ಆನ್‌ಲೈನ್ ವ್ಯವಹಾರವನ್ನು ಮಾಡುತ್ತಿದ್ದ ಅವರು ಮಗನನ್ನು ಸಂಪೂರ್ಣ ಗುಣಮುಖನಾಗಿಸಲು ಸಾಧ್ಯವಿರುವ ಎಲ್ಲ ಹೋರಾಟ ನಡೆಸುತ್ತಿದ್ದಾರೆ. ‘ಅವನಿಗೆ ಚಲಿಸಲು ಆಗುವುದಿಲ್ಲ ಮತ್ತು ಮಾತನಾಡಲೂ ಸಾಧ್ಯವಿಲ್ಲ. ಆದರೆ ಅವನಿಗೂ ಆತ್ಮವಿದೆ ಮತ್ತು ಭಾವನೆಗಳಿವೆ’ ಎನ್ನುತ್ತಾರೆ. ಆಗಾಗ್ಗೆ ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೇನು ಬೆರೆಸಿದ ನೀರು ಕುಡಿಸುತ್ತಾರೆ. ಮೆಂಕೆಸ್ ಸಿಂಡ್ರೋಮ್ ಕುರಿತಾದ ಮಾಹಿತಿಗಳು ಆನ್‌ಲೈನಲ್ಲಿ ಇಂಗ್ಲಿಷ್ ಭಾಷೆಯಲ್ಲಿದ್ದವು. ಅಷ್ಟೇನೂ ಓದಿಲ್ಲದ ಕ್ಸು, ಅನುವಾದದ ಸಾಫ್ಟ್‌ವೇರ್ ಬಳಸಿ ಅವುಗಳನ್ನು ಅಧ್ಯಯನ ಮಾಡಿದರು.

ಬಳಿಕ ತಂದೆಯ ಜಿಮ್‌ನಲ್ಲಿ ಲ್ಯಾಬ್ ನಿರ್ಮಿಸಿದರು. ತಾಮ್ರದ ಹಿಸ್ಟಿಡೈನ್ ಇದಕ್ಕೆ ಮದ್ದು ನೀಡಬಲ್ಲದು ಎಂಬುದನ್ನು ಅರಿತ ಬಳಿಕ, ಹಿಸ್ಟಿಡೈನ್ ಒಳಗೊಂಡ ಕಾಪರ್ ಕ್ಲೋರೈಡ್ ಡಿಹೈಡ್ರೇಟ್, ಸೋಡಿಯಂ ಹೈಡ್ರಾಕ್ಸೈಡ್ ಮತ್ತು ನೀರು ಮಿಶ್ರಣ ಮಾಡಿದರು. ತಾವೇ ಮನೆಯಲ್ಲಿ ತಯಾರಿಸಿದ ಔಷಧವನ್ನು ಮಗನಿಗೆ ಪ್ರತಿ ದಿನ ನೀಡತೊಡಗಿದರು. ಈ ಮೂಲಕ ಮಗುವಿನಲ್ಲಿ ಕೊರತೆಯಿದ್ದ ಕಾಪರ್ ಪ್ರಮಾಣ ಏರಿಕೆಯಾಗತೊಡಗಿತು. ಚಿಕಿತ್ಸೆ ಆರಂಭಿಸಿದ ಎರಡು ವಾರಗಳ ಬಳಿಕ ನಡೆಸಿದ ರಕ್ತ ಪರೀಕ್ಷೆಗಳಲ್ಲಿ ವರದಿ ನಾರ್ಮಲ್ ಬರಲು ಆರಂಭಿಸಿತು. ಈ ಮಗುವಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಆದರೆ ತಂದೆಯ ಮೃದಯವಾದ ಕೈ ತಲೆಯ ಮೇಲೆ ಬಂದೊಡನೆ ಸಣ್ಣನೆ ನಗುತ್ತದೆ. ‘ಮೊದಲು ಕೇಳಿದಾಗ ಇದು ನನಗೆ ತಮಾಷೆ ಎನಿಸಿತ್ತು. ಅದನ್ನು ಮಾಡುವುದು ಆತನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದ್ದೆ’ ಎಂದು ಕ್ಸು ಅವರ ತಂದೆ ಕ್ಸು ಜಿಯಾನ್‌ಹಾಂಗ್ ಹೇಳಿದ್ದಾರೆ.

- Advertisement -

ಆರು ವಾರಗಳ ಪ್ರಯತ್ನದ ಬಳಿಕ ಕಾಪರ್ ಹಿಸ್ಟಿಡೈನ್‌ನ ಒಂದು ಶೀಷೆ ತಯಾರಿಸಿದ್ದರು. ಮೊದಲು ಅದನ್ನು ಮೊಲಗಳ ಮೇಲೆ ಪ್ರಯೋಗಿಸಿದರು. ಬಳಿಕ ತಮ್ಮದೇ ದೇಹಕ್ಕೆ ಸೇರಿಸಿದರು. ಮೊಲಗಳು ಆರೋಗ್ಯವಂತವಾಗಿದ್ದವು. ನಾನೂ ಹುಷಾರಾಗಿದ್ದೆ. ಹೀಗಾಗಿ ಮಗನ ಮೇಲೆ ಪ್ರಯೋಗ ಆರಂಭಿಸಿದೆ. ಮಗುವಿನಲ್ಲಿ ಯಾವುದೇ ಅಡ್ಡ ಪರಿಣಾಮ ಕಾಣಿಸದೆ ಇದ್ದರಿಂದ ಹಂತ ಹಂತವಾಗಿ ಡೋಸೇಜ್ ಹೆಚ್ಚಿಸಿದ್ದಾಗಿ ಕ್ಸು ತಿಳಿಸಿದ್ದಾರೆ. ಆದರೆ ಈ ಔಷಧ ಕಾಯಿಲೆಯನ್ನು ಗುಣಪಡಿಸಲಾರದು. ಕಾಪರ್ ಚಿಕಿತ್ಸೆಯು ಮಗು ಜನಿಸಿದ ಮೊದಲ ಮೂರು ವಾರಗಳ ಆರಂಭದಲ್ಲಿ ನೀಡಿದರೆ ಮಾತ್ರವೇ ಕೆಲವು ಆನುವಂಶಿಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದಷ್ಟೇ. ಈ ಚಿಕಿತ್ಸೆಯು ಲಕ್ಷಣಗಳನ್ನು ಕಡಿಮೆ ಮಾಡಬಹುದೇ ವಿನಾ ಚೇತರಿಕೆ ನೀಡಲಾರದು ಎಂದು ಫ್ರಾನ್ಸ್‌ನ ಟೂರ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ಅಪರೂಪದ ಕಾಯಿಲೆಗಳ ತಜ್ಞೆ ಪ್ರೊಫೆಸರ್ ಆನಿಕ್ ಟೌಟೇನ್ ಹೇಳಿದ್ದಾರೆ. ಇದು ಕಾಯಿಲೆಯನ್ನು ಕಡಿಮೆ ಮಾಡುತ್ತದೆಯೇ ವಿನಾ ಗುಣಪಡಿಸುವುದಿಲ್ಲ ಎಂದು ಕ್ಸು ಕೂಡ ಒಪ್ಪಿಕೊಂಡಿದ್ದಾರೆ.

ಕ್ಸು ಅವರ ಪ್ರಯೋಗ ಕಂಡು ಅಂತಾರಾಷ್ಟ್ರೀಯ ಬಯೋಟೆಕ್ ಲ್ಯಾಬ್ ವೆಕ್ಟರ್ ಬಿಲ್ಡರ್ ಆಸಕ್ತಿ ಪ್ರದರ್ಶಿಸಿದೆ. ಈಗ ಅದು ಕ್ಸು ಅವರೊಂದಿಗೆ ಮೆಂಕೆಸ್ ಸಿಂಡ್ರೋಮ್‌ಗೆ ಜೀನ್ ಥೆರಪಿ ಸಂಶೋಧನೆಯನ್ನು ಆರಂಭಿಸುತ್ತಿದೆ. ಕ್ಸು ಅವರ ಕುಟುಂಬವನ್ನು ಕಂಡು ಪ್ರಭಾವಿತರಾಗಿರುವುದಾಗಿ ಕಂಪೆನಿಯ ಮುಖ್ಯ ವಿಜ್ಞಾನಿ ಬ್ರೂಸ್ ಲಾಹ್ನ್ ಹೇಳಿದ್ದಾರೆ. ಅಲ್ಲದೆ, ಇದು ಅಪರೂಪದಲ್ಲಿಯೇ ಅಪರೂಪದ ಕಾಯಿಲೆ ಎಂದಿದ್ದಾರೆ. ಮೆಂಕೆಸ್ ದೃಢಪಟ್ಟಿರುವ ಇತರೆ ಮಕ್ಕಳ ಪೋಷಕರು ಕೂಡ ಕ್ಸು ಅವರನ್ನು ಸಂಪರ್ಕಿಸಿದ್ದು, ತಮ್ಮ ಮಕ್ಕಳಿಗೂ ಚಿಕಿತ್ಸೆ ನೀಡುವಂತೆ ಕೋರಿದ್ದಾರೆ. ಆದರೆ ಅದಕ್ಕೆ ಕ್ಸು ಒಪ್ಪಿಕೊಂಡಿಲ್ಲ. .ನನ್ನ ಮಗುವಿನ ಜೀವಕ್ಕೆ ಮಾತ್ರ ನಾನು ಹೊಣೆಗಾರನಾಗಬಲ್ಲೆ’ ಎಂದು ಅವರು ಹೇಳಿದ್ದಾರೆ.

ಕ್ಸು ಅವರ ಪ್ರಯೋಗಕ್ಕೆ ಅಧಿಕಾರಿಗಳೂ ಅಡ್ಡಿಪಡಿಸಿರಲಿಲ್ಲ. ಅವರು ಮನೆಯಲ್ಲಿ ಸ್ವಂತಕ್ಕೆ ಮಾತ್ರವೇ ಔಷಧ ತಯಾರಿಸಿಕೊಳ್ಳುತ್ತಿರುವರೆಗೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಾಮಾನ್ಯ ವ್ಯಕ್ತಿ ಅಗತ್ಯಕ್ಕೆ ಬಿದ್ದು ಅಪರೂಪದ ರೋಗಕ್ಕೆ ಮದ್ದು ಕಂಡುಹಿಡಿಯುವುದರಲ್ಲಿ ಸಾಕಷ್ಟು ಯಶಸ್ಸಾಗಿದ್ದು ಆಶ್ಚರ್ಯ ಮತ್ತು ಮೆಚ್ಚುಗೆಗೆ ಅರ್ಹವಾಗಿದೆ.

Join Whatsapp