ನವದೆಹಲಿ: ಶಾಲಾ ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಶಿಕ್ಷಣ ಸಂಸ್ಥೆಗಳ ಹಕ್ಕನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ನ ಹಿಜಾಬ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಅರ್ಜಿ ವಿಚಾರಣೆ ವಿಳಂಬವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ರ ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಬಗ್ಗೆ ಇಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಪ್ರಸ್ತಾಪಿಸಿದ ವೇಳೆ ನ್ಯಾಯಮೂರ್ತಿಗಳು ಹೀಗೆ ಅಭಿಪ್ರಾಯಪಟ್ಟಿದ್ದಾರೆ. ಈ ಅರ್ಜಿಯ ವಿಚಾರಣೆ ಆರಂಭಿಸಬೇಕಿತ್ತು, ಆದರೆ ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರ ಪೈಕಿ ಓರ್ವರು ಅನಾರೋಗ್ಯಕ್ಕಿಡಾಗಿದ್ದಾರೆ. ಹೀಗಾಗಿ ವಿಚಾರಣೆ ವಿಳಂಬವಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ವಿಶೇಷ ಪೀಠ ರಚನೆ ಮಾಡಲಾಗುವುದು ಎಂದು ಸಿಜೆಐ ಹೇಳಿದರು.
ಕನಿಷ್ಠ ವಿಚಾರಣೆಗೆ ದಿನಾಂಕ ನಿಗಧಿಯಾದರೂ ಮಾಡಿ ಎಂದು ಮೀನಾಕ್ಷಿ ಅರೋರಾ ಮನವಿ ಮಾಡಿದರು. ಆದರೆ ಅದಕ್ಕೂ ಸಿಜೆಐ ನಿರಾಕರಿಸಿದರು. ಕಳೆದ ವಿಚಾರಣೆಯಲ್ಲಿ ಜುಲೈನಲ್ಲಿ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು. ಶಾಲಾ ಕಾಲೇಜುಗಳ ತರಗತಿಯಲ್ಲಿ ಹಿಜಬ್ ಧರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶ ನೀಡಿತ್ತು. ಈ ಆದೇಶ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂದ ಮೂಲಭೂತ ಅವಶ್ಯಕತೆ ಅಲ್ಲ ಎಂದು ಹೇಳಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.