ಚೆನ್ನೈ: ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸಿದ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಆರು ವಿದ್ಯಾರ್ಥಿಗಳಿಂದ ಮುಖ್ಯೋಪಾಧ್ಯಾಯಿನಿಯೊಬ್ಬರು ಶೌಚಾಲಯ ಸ್ವಚ್ಛ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ವಿದ್ಯಾರ್ಥಿಯೊಬ್ಬರ ತಾಯಿ ನೀಡಿದ ದೂರಿನ ಅನ್ವಯ ಮುಖ್ಯ ಶಿಕ್ಷಕಿ ಗೀತಾ ರಾಣಿ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ.
ಕಳೆದ ವಾರ ಮಕ್ಕಳು ಕೈಯಲ್ಲಿ ಪಾತ್ರೆ ಹಾಗೂ ಕೋಲು ಹಿಡಿದುಕೊಂಡು ಶೌಚಾಲಯದಿಂದ ಹೊರ ಬರುವುದನ್ನು ಗಮನಿಸಿದ್ದೆ, ಯಾಕೆ ಎಂದು ಪ್ರಶ್ನಿಸಿದಾಗ, ಮುಖ್ಯ ಶಿಕ್ಷಕಿ ಶೌಚಾಲಯ ಶುಚಿಗೊಳಿಸಲು ನಿರ್ದೇಶಿಸಿದ್ದಾರೆ ಎಂದು ಉತ್ತರಿಸಿದ್ದರು. ತರಗತಿಯಲ್ಲಿ 40 ಮಕ್ಕಳಿದ್ದರೂ, ನಮ್ಮ ಮಕ್ಕಳೊಂದಿಗೆ ಅವರು ಶೌಚಾಲಯ ಸ್ವಚ್ಛಗೊಳಿಸುತ್ತಾರೆ‘ ಎಂದು ದೂರುದಾರೆ ಜಯಂತಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಬಾಲ ನ್ಯಾಯ ಕಾಯ್ದೆ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಮುಖ್ಯ ಶಿಕ್ಷಕಿ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.