ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಹಣ, ಪಿಸ್ತೂಲ್ ದರೋಡೆ: ಐವರ ಬಂಧನ

Prasthutha|

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ, ನಗದು ಪಿಸ್ತೂಲ್ನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಂಜಯನಗರ ಪೊಲೀಸರು 1.7 ಲಕ್ಷ ನಗದು, ಕಾರು ,ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಸಂಜಯನಗರದ ಮಂಜುನಾಥ್, ಮಹಮ್ಮದ್ ಶೋಯಬ್ ರಬ್ಬಾನಿ ಅಲಿಯಾಸ್ ಪಾಕರ್ ಅಲಿ, ಪ್ರಶಾಂತ್ ಕುಮಾರ್, ದುರ್ಗೇಶ ಹಾಗೂ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.

ಕಳೆದ ಜ. 23 ರಂದು ಬೆಳಗ್ಗೆ 8-45ರ ವೇಳೆ ಸಂಜಯನಗರ ಮನೆಯೊಂದಕ್ಕೆ ಬಂದ ಬಂಧಿತರಲ್ಲಿ ಇಬ್ಬರು ನಾವು ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮನೆ ಪರೀಶೀಲಿಸಬೇಕೆಂದು ಹೇಳಿ, ವಾರ್ಡ್ರೂಬ್ ನಲ್ಲಿಟ್ಟಿದ್ದ ದಾಖಲೆಗಳನ್ನು ನೋಡಿ, ವಾರ್ಡ್ ರೂಬ್ ನ ಲಾಕರ್ ನಲ್ಲಿದ್ದ 3.5 ಲಕ್ಷ ರೂ. ನಗದು ಹಾಗೂ ಒಂದು ಪಿಸ್ತೂಲ್ ಅನ್ನು ತೆಗೆದುಕೊಂಡು ಹೋಗಿದ್ದರು.

- Advertisement -

ಈ ಸಂಬಂಧಿಸಿದಂತೆ ಅನುಮಾನ ಬಂದು ಮನೆಯ ಮಾಲೀಕರು ದೂರು ನೀಡಿದ್ದು   ಪೊಲೀಸ್ ಇನ್ಸ್ಪೆಕ್ಟರ್ ಬಾಲರಾಜ್ ಅವರು ಸುಲಿಗೆ, ಮೋಸ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ 1.7 ಲಕ್ಷ ರೂ.  ಹಣ, 1 ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 1-ಕಾರು, ಆದಾಯ ತೆರಿಗೆ ಇಲಾಖೆಯ ಹೆಸರಿನ ನಕಲಿ ಗುರುತಿನ ಚೀಟಿಯನ್ನು  ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿತ್ತು

ಮೊದಲ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮತ್ತೊಂದು ಪಿಸ್ತೂಲ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ದೂರುದಾರರ ತಂದೆಯವರು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಹೆಚ್ಚಿಗೆ ಬಾಡಿಗೆ ಹಣ ಬರುತ್ತಿದ್ದ ವಿಚಾರ ತಿಳಿದಿದ್ದ, ಮನೆ ಬಾಡಿಗೆ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದ ಆರೋಪಿ ಕುಮಾರ್  ಸ್ಥಳೀಯ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್  ಜೊತೆ ಸೇರಿ ಮಾಹಿತಿ ಕಲೆಹಾಕಿ ಉಳಿದ ಆರೋಪಿಗಳೊಂದಿಗೆ ಒಳಸಂಚು ನಡೆಸಿ, ಪಿರ್ಯಾದಿ ಮನೆಗೆ ಆದಾಯ ತೆರಿಗೆ ಅಧಿಕಾರಿಗಳೆಂದು ನುಗ್ಗಿ, ನಗದು ಹಣ ಹಾಗೂ ಪಿಸ್ತೂಲ್  ದರೋಡೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಮೊದಲ ಆರೋಪಿಯ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆಯ 1 ದರೋಡೆ ಪ್ರಕರಣ ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪಾಟೀಲ್ ತಿಳಿಸಿದರು.



Join Whatsapp