ಸ್ಪೀಕರ್, ಪೀಠದ ಗೌರವ ಮರೆತು RSS ಹೊಗಳಿ ಮಾತನಾಡಿದ್ದಾರೆ; ಅಧಿಕೃತ ಪ್ರತಿಪಕ್ಷ ಸುಮ್ಮನೆ ಕೂತಿತ್ತು: ಎಚ್ ಡಿಕೆ

Prasthutha|

ಹುಬ್ಬಳ್ಳಿ: ನಿನ್ನೆ ಸದನದಲ್ಲಿ ಸಭಾಧ್ಯಕ್ಷರು ಪೀಠದ ಗೌರವ ಮರೆತು, ಆರ್ ಎಸ್ ಎಸ್ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ರೋಷ ಎನ್ನುವುದು ಇದ್ದಿದ್ದರೆ ಸದನದಲ್ಲೇ ಪ್ರತಿಭಟನೆ ಮಾಡಬೇಕಿತ್ತು ಎಂದರು. ಸಭಾಧ್ಯಕ್ಷರು ಪೀಠದ ಗೌರವ ಮರೆತು ಮಾತನಾಡಿದ್ದಾರೆ. ಅಧಿಕೃತ ಪ್ರತಿಪಕ್ಷ ಸುಮ್ಮನೆ ಕೂತಿತ್ತು ಎಂದು ಅವರು ಪ್ರಹಾರ ನಡೆಸಿದರು.

- Advertisement -

ಸಾಧು ಸಂತರು ಧರಿಸುವ ಕೇಸರಿ ಶಿರವಸ್ತ್ರದ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತೀವ್ರ ಚಾಟಿ ಬೀಸಿರುವ ಹೆಚ್.ಡಿ.ಕೆ ಎಷ್ಟೇ ಆಗಲಿ, ಅವರು ಕನ್ನಡ ಪಂಡಿತರಲ್ಲವೇ? ಎಂದು ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾತುಗಳಿಗೆ ನಾನು ಮಹತ್ವ ನೀಡಲ್ಲ. ಈ ಸೂಕ್ಷ್ಮ ವಿಷಯದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಸದನದಲ್ಲೇ ಹೇಳಿದ್ದೇನೆ ಎಂದರು. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ಅವರು ನಿನ್ನೆ ಸದನದಲ್ಲಿ ನಿಲುವಳಿ ಸೂಚನೆ ಮೇಲೆ ಮಾತನಾಡಿದರು. ವರ್ತಮಾನದ ವಿಷಯಗಳನ್ನು ಬಿಟ್ಟು ಹಳೆಯ ವಿಷಯಗಳನ್ನು ಕೆದಕಿದರು. ಅವರ ಭಾಷಣದ ಕೊನೆ ಕ್ಷಣದಲ್ಲಿ ಯಾರೋ ಬಂದು ಕಿವಿಯಲ್ಲಿ ಹೇಳಿದರು ಅಂತ ಹಿಜಾಬ್ ಬಗ್ಗೆ ಮಾತನಾಡಿದ್ದಾರೆ ಎಂದರು.

- Advertisement -

ಇನ್ನು ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು, ಅವರು ಕನ್ನಡ ಪಂಡಿತರಿದ್ದಾರೆ. ನನಗಿಂತ ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲ ಇನ್ನೊಬ್ಬ ನಾಯಕನಿಲ್ಲ ಎಂದು ನಿನ್ನೆಯ ಹೇಳಿಕೊಂಡಿದ್ದಾರೆ. ಸಂಧಿ, ಸಮಾಸ ಮತ್ತು ವ್ಯಾಕರಣದಲ್ಲಿ ಅವರು ಪಂಡಿತರಂತೆ. ಆ ಸಂಸ್ಕಾರದ ಮೂಸೆಯಿಂದ ಇಂಥ ಆಣಿಮುತ್ತುಗಳು ಉದುರುತ್ತವೆ ಎಂದು ಟೀಕಿಸಿದರು.

ಮಹದಾಯಿ ಪಾದಯಾತ್ರೆ ಬಗ್ಗೆ ಕಿಡಿ:

ಹಿಂದೆ ಮಹದಾಯಿ ನೀರಿಗಾಗಿ ಯಮನೂರು ರೈತರು ಪಾದಯಾತ್ರೆ ಮಾಡಿದಾಗ ಇದೇ ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಮಹಿಳೆಯರು, ಕೂಲಿ ಕಾರ್ಮಿಕರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಿ ಅವರೆಲ್ಲರನ್ನೂ ಬಳ್ಳಾರಿ, ಚಿತ್ರದುರ್ಗ ಜೈಲುಗಳಿಗೆ ಅಟ್ಟಲಾಯಿತು. ಈಗ ಇವರು ಮಹದಾಯಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸ್ವಲ್ಪವಾದರೂ ಆತ್ಮಸಾಕ್ಷಿ ಇದೆಯಾ ಎಂದು ಕಿಡಿ ಕಾರಿದರು.

ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೊರಟರು. ಅದು ಕೃಷ್ಣೆಯ ನಾಡಿಗೆ ಆಂಧ್ರದ ಕಡೆಗೆ ಎನ್ನುವಂತೆ ಆಯಿತು. ಐದು ವರ್ಷ ಸರಕಾರ ಇದ್ದರೂ ಏನು ಮಾಡಲಿಲ್ಲ. ಈಗ ಮತ್ತೆ ಪಾದಯಾತ್ರೆ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಛೇಡಿಸಿದರು.



Join Whatsapp