ಬೆಂಗಳೂರು: ಎಲ್ಲಾ ಧರ್ಮದಲ್ಲೂ ಕಿಡಿಗೇಡಿಗಳು ಇದ್ದಾರೆ. ನಾಗಮಂಗಲದ ಘಟನೆಗೆ ಅಂತಹ ಕಿಡಿಗೇಡಿಗಳೇ ಕಾರಣ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಧರ್ಮದ ಕೆಲಸ ಆಗುವಾಗ ಇನ್ನೊಂದು ಧರ್ಮದವರು ಅಡ್ಡಿಪಡಿಸುವುದು ಸರಿಯಲ್ಲ.
ಕಿಡಿಗೇಡಿಗಳಿಂದ ಧರ್ಮ ಧರ್ಮದ ನಡುವೆ ಗದ್ದಲ ಆಗುತ್ತದೆ. ದ್ವೇಷ ಭಾವನೆ ಬಿತ್ತದ ರೀತಿ ನಾವೆಲ್ಲ ಇರಬೇಕು. ತಪ್ಪು ಯಾರೇ ಮಾಡಿದರೂ ಕೂಡ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ. ಯಾವ ಧರ್ಮದವರು ತಪ್ಪು ಮಾಡಿದರೂ ಕೂಡ ತಪ್ಪೇ. ಇಂಥಹ ಘಟನೆ ಆಗಬಾರದಿತ್ತು, ಆಗಿದ್ದು ವಿಷಾದಕರ, ನಾವ್ಯಾರು ಇಂಥಹ ಘಟನೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಬಿಜೆಪಿ ಜೊತೆಗೆ ಸೇರಿಕೊಂಡಿದ್ದಾರೆ. ಈಗ ಅವರು ಬೆಂಕಿ ಹೊತ್ತಿಕೊಂಡ ಶೆಡ್ನಲ್ಲಿ ಕಡ್ಡಿ ಗೀರುವುದು ಬೇಡ. ಹಿಂದೆ ಇದೇ ಕುಮಾರಸ್ವಾಮಿ ಮುಸ್ಲೀಮರನ್ನು ಓಲೈಸಿರಲಿಲ್ವಾ? ಅವರು ಮಾಜಿ ಸಿಎಂ ಆದವರು ಗೌರವಯುತ ಹೇಳಿಕೆ ಕೊಡಲಿ. ಇಂಥಹ ಸಂದರ್ಭದಲ್ಲಿ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಒಳ್ಳೆಯದಲ್ಲ. ಗೌರವಯುತವಾಗಿ ಮಾತನಾಡಲಿ. ಇಲ್ಲಿ ಬೇಳೆ ಬೆಯಿಸಿಕೊಳ್ಳೋದು ಬೇಡ ಎಂದು ಕುಟುಕಿದ್ದಾರೆ.