ಚನ್ನಪಟ್ಟಣ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಕರಿಯ (ಕಾಲಿಯಾ) ಎಂದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
“ಕುಮಾರಸ್ವಾಮಿಯವರನ್ನು ನಾನು ಯಾವತ್ತಿಗೂ ಕರಿಯಣ್ಣ ಅಂತಾನೇ ಕರೆಯೋದು” ಅಂತ ಜಮೀರ್ ಸಮರ್ಥಿಸಿಕೊಂಡಿದ್ದಾರೆ.
“ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಅವರನ್ನು ಕರಿಯಣ್ಣ ಅಂತಾನೇ ಕರೆಯುತ್ತಿದ್ದೆ” ಅಂತ ಜಮೀರ್ ಹೇಳಿದ್ದಾರೆ.
ಕುಮಾರಸ್ವಾಮಿಯವರಿಗೆ ಕರಿಯಾ ಅಂತ ಜಮೀರ್ ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಎಚ್ಚೆತ್ತ ಜಮೀರ್ ಸುದ್ದಿಗೋಷ್ಠಿ ಕರೆದು, ತಮ್ಮ ಹೇಳಿಕೆಗೆ ಇದೀಗ ಸಮರ್ಥನೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಜಮೀರ್, ಈವಾಗ ಅದು ಬಾಯಲ್ಲಿ ಹಾಗೇ ಬಂತು, ಅದೇ ರೀತಿಯಲ್ಲಿ ಹೇಳಿದೆ. ನಾನು ಪ್ರೀತಿಯಿಂದ ಕರೆದಿದ್ದೇನೆ ಅಂತ ಹೇಳಿದ್ದಾರೆ. ಆದರೆ ಹಿಂದಿನ ಆ ಪ್ರೀತಿ ಈವಾಗಿಲ್ಲ ಎಂದಿದ್ದಾರೆ. ವಿರೋಧ ಮಾಡಿಕೊಳ್ಳುವರು ವಿರೋಧ ಮಾಡಿಕೊಳ್ಳಲಿ ಅಂತಲೂ ಜಮೀರ್ ಹೇಳಿದ್ದಾರೆ.
ನನ್ನ ಸಮಾಜದ ಜನರನ್ನು ದುಡ್ಡಲ್ಲಿ ಖರೀದಿ ಮಾಡಲು ಕುಮಾರಸ್ವಾಮಿ ಹೋಗಿದ್ದಾರೆ. ಅದಕ್ಕಾಗಿ ನಾನು ಸಾಮಾನ್ಯವಾಗಿ ಆ ರೀತಿ ಕರೆದಿದ್ದೇನೆ ಎಂದು ಜಮೀರ್ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ನನಗೆ ರಾಜಕೀಯ ಗುರು ಅಂದ್ರೆ ದೇವೇಗೌಡರು. ಆದರೆ 93ನೇ ವಯಸ್ಸಿನಲ್ಲಿ ಕುಮಾರಸ್ವಾಮಿ ದೇವೇಗೌಡರರಿಂದ ಪ್ರಚಾರ ಮಾಡಿಸುತ್ತಿದ್ದಾರೆ. ಇದು ನನಗೆ ನೋವು ತಂದಿದೆ ಅಂತ ಜಮೀರ್ ಹೇಳಿದ್ದಾರೆ.