ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್.ಡಿ.ಕುಮಾರಸ್ವಾಮಿ ಅವಿರೋಧ ಆಯ್ಕೆ

Prasthutha|

- Advertisement -

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಅವಿರೋಧ ಆಯ್ಕೆ ಆಗಿದ್ದಾರೆ.

ಕಳೆದ ವಿಧಾನಸಭೆ ಅವಧಿಯಲ್ಲೂ ಮಾಜಿ ಮುಖ್ಯಮಂತ್ರಿ ಅವರೇ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸದನದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು.

- Advertisement -

ವಿಧಾನಸಭೆ ಸಭಾಧ್ಯಕ್ಷರ ಕಚೇರಿಯಲ್ಲಿ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ತಮ್ಮ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

ಈ ಸಭೆಯಲ್ಲಿ ಕುಮಾರಸ್ವಾಮಿ ಅವರು, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರೂ ಸೇರಿದಂತೆ ಪಕ್ಷದ ಎಲ್ಲ 19 ನೂತನ ಶಾಸಕರು, ವಿಧಾನ ಪರಿಷತ್ ನ ಎಲ್ಲಾ ಸದಸ್ಯರು ಹಾಜರಿದ್ದರು.

ಸದನದಲ್ಲಿ ವಿಷಯಾಧಾರಿತ ಹೋರಾಟ:

ವಿಧಾನಮಂಡಲದಲ್ಲಿ ಜನಪರವಾಗಿ, ವಿಷಯಾಧಾರಿತವಾಗಿ ಹೋರಾಟ ಮಾಡುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಕ್ಷವು ಚುನಾವಣೆಯಲ್ಲಿ ಸೋತಿದೆ. ಸೋತಿದೆ ಎಂದಾಕ್ಷಣ ಎದೆಗುಂದುವ ಅಗತ್ಯ ಇಲ್ಲ. ಇನ್ನೂ ಕೆಚ್ಚೆದೆಯಿಂದ ಪಕ್ಷವನ್ನು ಕಟ್ಟಬೇಕಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಶಾಸಕರು, ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳು ಕೆಲಸ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿತವಚನ ಹೇಳಿದರು.

ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಅವರು ಸಭಾಧ್ಯಕ್ಷರ ಕಚೇರಿಯಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದ ಚನ್ನಪಟ್ಟಣ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಸಿದರು.



Join Whatsapp