►ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿವೆ
ಚನ್ನಪಟ್ಟಣ: ಹಿಜಾಬ್ ಮತ್ತು ಕೇಸರಿ ಶಾಲು ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.
ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ವಿವಾದ ಮತ್ತು ಗಲಾಟೆಗೆ ಚಿತಾವಣೆ ನೀಡುತ್ತಿರುವ ವ್ಯಕ್ತಿಗಳ ಮಕ್ಕಳು ಇಂಗ್ಲಿಷ್ ಕಾನ್ವೆಂಟ್ ಗಳಲ್ಲಿ ನೆಮ್ಮದಿಯಾಗಿ ಓದುತ್ತಿದ್ದರೆ ಬಡವರ ಮಕ್ಕಳಿಗೆ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಹಾಕಿ ಗಲಾಟೆಗೆ ಅವರನ್ನು ಗುರಾಣಿಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು, ವಿವಾದಗಳ ಹಿಂದಿರುವ ಸಂಘಟನೆ, ಪಕ್ಷಗಳ ವಿರುದ್ಧ ಹರಿಹಾಯ್ದರು.
ಇದು ಹಲವಾರು ದೇಶಗಳಲ್ಲಿ ಚರ್ಚೆ ಮಾಡುವ ಹಂತಕ್ಕೆ ಹಿಜಾಬ್ ವಿವಾದವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್ – ಬಿಜೆಪಿ ಪಕ್ಷಗಳ ಜತೆಗೆ ಹಲವು ಸಂಘಟನೆಗಳಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳುತ್ತೇನೆ. ಅಮಾಯಕ, ಮುಗ್ಧ ಮಕ್ಕಳ ಬದುಕಿನ ಜೊತೆಗೆ ಚೆಲ್ಲಾಟ ಅಡುತ್ತಿದ್ದಿರಿ. ಇದು ಸರಿಯಲ್ಲ. ಈ ಸಂಘರ್ಷ ಯಾವ ಶಾಲೆಗಳಲ್ಲಿ ನಡೆಯುತ್ತಿದೆ? ಇದು ದೊಡ್ಡದೊಡ್ಡ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ? ಇಲ್ಲ. ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ಹಾಗೂ ವಿವಾದದ ಹಿಂದಿರುವ ಸಂಘಟನೆಗಳ ನಾಯಕರ ಮಕ್ಕಳು ಯಾರೂ ಸರಕಾರಿ ಶಾಲೆಗಳಲ್ಲಿ ಅವರ ಮಕ್ಕಳನ್ನು ಓದಿಸುತ್ತಿಲ್ಲ. ಅವರೆಲ್ಲರೂ ಸಹ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರು ತಾವು ಜನ್ಮಕೊಟ್ಟ ಮಕ್ಕಳ ಹೆಗಲ ಮೇಲೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರಾ? ಅದೂ ಇಲ್ಲ. ಅವರ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಹೋರಾಟ ಯಾಕೆ ಮಾಡಿಸುತ್ತಿಲ್ಲ. ಅಮಾಯಕ, ಬಡಮಕ್ಕಳ ಮಕ್ಕಳ ಹೆಗಲ ಮೇಲೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರೆ.
ಇನ್ನೊಂದು ಗುಂಪು ಹಿಜಾಬ್ ಹೆಸರಿನಲ್ಲಿ ಹೋರಾಟ ಮಾಡಿಸಿ ಅವರು ಬೇಳೆ ಬೇಯಿಸಿಕೊಳ್ಳಲು ಹೊರಟ್ಟಿದ್ದಾರೆ. ಇಲ್ಲಿ ಅಮಾಯಕ ಮಕ್ಕಳು, ಖಾಸಗಿ ಶಾಲೆಯಲ್ಲಿ ಓದುವ ಶಕ್ತಿ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಈ ವಿವಾದಗಳಿಗೆ ಗುರಾಣಿಗಳು ಆಗುತ್ತಿದ್ದಾರೆ. ಸರಕಾರಿ ಶಾಲೆಗಳ ಮಕ್ಕಳು ಬಲಿ ಆಗುತ್ತಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಹೀನ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಮಕ್ಕಳ ಪೋಷಕರು ಸಹ ಈ ವಿವಾದಗಳ ಹಿಂದಿರುವ ದುರುದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು.
ಎಲ್ಲ ಕಡೆ ಪೊಲೀಸರು ಪ್ರತಿಭಟನೆ ಮಾಡುತ್ತಿರುವ ಮಕ್ಕಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ನಾಳೆಯ ದಿನ ಆ ಮಕ್ಕಳ ವಿರುದ್ಧ ಕೇಸುಗಳು ದಾಖಲಾಗಿ ಅವರು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೆ ಅವರ ಭವಿಷ್ಯ ಕಥೆ ಏನು? ಒಮ್ಮೆ ಪೊಲೀಸ್ ಕೇಸು ಬಿದ್ದರೆ ಅವರ ಜೀವನವೇ ಹಾಳಾಗುತ್ತದೆ. ಎಲ್ಲೂ ಕೆಲಸ ಸಿಗುವುದಿಲ್ಲ. ತೆವಲಿಗೆ, ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಪಕ್ಷಗಳು, ಸಂಘಟನೆಗಳು ಮಕ್ಕಳನ್ನು ಈ ವಿವಾದಗಳಿಗೆ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು.
ಮುಂದೆ ಮಕ್ಕಳ ಈ ವಿಡಿಯೋಗಳನ್ನು ಇಟ್ಟುಕೊಂಡು ಕೇಸುಗಳನ್ನು ಹಾಕಿ ಅವರನ್ನು ಕೋರ್ಟ್ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಾರೆ. ಈಗಾಗಲೇ ಕೆಲ ಕಡೆ ಮಕ್ಕಳ ಮೇಲೆ FIR ಆಗಿದೆ ಎಂದು ಮಾಹಿತಿ ಇದೆ. ಇದು ನಿರಂತರವಾಗಿ ನಡೆಯುತ್ತದೆ. ಕೆಲ ಮಕ್ಕಳಿಗೆ ಎರಡು ಹೊತ್ತಿನ ಊಟಕ್ಕೂ ಇಲ್ಲದ ಕಷ್ಟದ ಪರಿಸ್ಥಿತಿ ಇದೆ. ಅಂತಹ ಮಕ್ಕಳ ಜೀವನದಲ್ಲಿ ಇವರು ಚೆಲ್ಲಾಟ ಆಡುತ್ತಿದ್ದಾರೆ. ಸಾವಿರಾರು ಜನ ಮಕ್ಕಳ ಮೇಲೆ ಕೇಸ್ ಬೀಳಲಿದೆ. ಇಂಥ ಹೀನ ಕೆಲಸವನ್ನು ಮೊದಲು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ನ್ಯಾಯಾಯಲಗಳ ಮೇಲೆ ಒತ್ತಡ ಮಾಡಲು ಸಾಧ್ಯವಿಲ್ಲ. ನ್ಯಾಯಾಂಗ ಇದರಲ್ಲಿ ಮಧ್ಯಸ್ಥಿಕೆ ವಹಿಸಿ ಈ ಪ್ರಕರಣವನ್ನ ತಿಳಿಗೊಳಿಸಬೇಕು ಎನ್ನುವುದು ನನ್ನ ಮನವಿ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಿಯಾಂಕಾ ಗಾಂಧಿ, ರೇಣುಕಾಚಾರ್ಯ ಹೇಳಿಕೆ ಸರಿ ಅಲ್ಲ:
ಹಿಜಾಬ್ ಬಗ್ಗೆ ಹೇಳಿಕೆ ನೀಡುವ ಭರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನೀಡಿರುವ ಹೇಳಿಕೆಗಳು ಸರಿ ಅಲ್ಲ. ಅವುಗಳನ್ನು ನಾನು ಒಪ್ಪುವುದಿಲ್ಲ.
ಅವರ ಹೇಳಿಕೆಗಳ ಬಗ್ಗೆ ನಾನು ಮಾತನಾಡುವ ಅಗತ್ಯ ಇಲ್ಲ. ಆದರೆ ಜನಪ್ರತಿನಿಧಿಯಾಗಿ ಶಾಸಕರು ಮಾತನಾಡಿದ್ದು ತಪ್ಪು. ಅವರು ಈಗ ಕ್ಷಮೆ ಕೋರಿಕೊಂಡಿದ್ದಾರೆ. ಮುಂದೆ ಹೇಳಿಕೆ ನೀಡಬೇಕಾದರೆ ಎಚ್ಚರಿಕೆ ವಹಿಸಿ ಮಾತನಾಡಲಿ ಎಂದಷ್ಟೇ ನನ್ನ ಸಲಹೆ.
ಈ ಪ್ರಕರಣದಲ್ಲಿ ಸರ್ಕಾರದ ವೈಫಲ್ಯತೆ ಎದ್ದು ಕಾಣುತ್ತಿದೆ. ಗೃಹ ಸಚಿವರು ಮತ್ತು ಸರ್ಕಾರದ ವೈಫಲ್ಯ ಈ ಪ್ರಕರಣದಲ್ಲಿ ಹೆಚ್ಚು. ಇದರಿಂದ ಅಮಾಯಕ ಮಕ್ಕಳ ಜತೆ ಚೆಲ್ಲಾಟ ಆಡಿದ್ದು ಸಾಕು. ಮಂಡ್ಯದಲ್ಲಿ ಘೋಷಣೆ ಕೂಗಿದ್ದ ಯುವತಿಗೆ ಕೆಲ ಸಂಘಟನೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದರೆ ಈ ಘಟನೆಗಳ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಈ ದೇಶವನ್ನ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ ಇವರೆಲ್ಲ. ಇಂತಹ ವಿಚಾರಕ್ಕೆ ಪ್ರಚೋದನೆ ಮಾಡುವವರ ಮೇಲೆ ಪೋಷಕರು, ಶಾಲಾ ಮಕ್ಕಳು, ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು.
ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಈ ನಾಡು ಶಾಂತಿಯ ಬೀಡು. ಹಾಗಾಗಿ ಇಂತಹದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದು ಮನವಿ ಮಾಡ್ತೇನೆ.
ಡಿಕೆಶಿ ಹೇಳಿಕೆ ಬಗ್ಗೆ ಹೆಚ್ ಡಿಕೆ ಹೇಳಿದ್ದೇನು?
ಬಿಜೆಪಿ ಸರಕಾರದ ಸಚಿವರ ಮಗನೊಬ್ಬ ಕೇಸರಿ ಶಾಲು ಹಂಚುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಓದಿದ್ದೇನೆ. ಅವರ ಬಳಿ ಮಾಹಿತಿ ಇದ್ದು ಹೇಳಿದ್ದಾರೋ, ಮಾಹಿತಿ ಇಲ್ಲದೇ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಮಾಹಿತಿ ಇದ್ದರೆ ಸಾಕ್ಷಿ ಸಮೇತ ಜನತೆ ಮುಂದೆ ಇಟ್ಟರೆ ಒಪ್ಪುತ್ತಾರೆ. ಇಲ್ಲಾಂದ್ರೆ ಗಾಳಿಯಲ್ಲಿ ನಾನು ಒಂದು ಗುಂಡು ಹಾರಿಸುತ್ತೇನೆ ಎಂದಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.