ಹಿಂದಿ ಹೇರಿಕೆ ವಿರುದ್ಧ ಹೆಚ್. ಡಿ.ಕುಮಾರಸ್ವಾಮಿ ಆಕ್ರೋಶ

Prasthutha|

- Advertisement -

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ರಾಜ್ಯದ ಆರೋಗ್ಯ ಖಾತೆ ಮಂತ್ರಿ ಡಾ.ಕೆ.ಸುಧಾಕರ್ ಅವರು ಕನ್ನಡ ದ್ರೋಹಿಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.

ಹಿಂದಿ ಹೇರಿಕೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಪರ ಹೇಳಿಕೆ ವಿರೋಧಿಸಿ ಹಮ್ಮಿಕೊಳ್ಳಲಿರುವ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಆರ್ ಎಸ್ ಎಸ್ ನ ಹಿಡನ್ ಅಜೆಂಡಾಗಳನ್ನು ಬಲವಂತವಾಗಿ ಹೇರಲು ಮುಂದಾಗಿದೆ. ಅದರಲ್ಲಿ ಈ ಹಿಂದಿ ಹೇರಿಕೆ ಕೂಡ ಒಂದು. ಅದನ್ನು ಬಿಜೆಪಿ ನಾಯಕರು, ಸಚಿವರು ಸಮರ್ಥನೆ ಮಾಡುತ್ತಿರುವುದು ಸರಿಯಲ್ಲ ಎಂದರು ಎಂದು ಅವರು ಹೇಳಿದರು.

- Advertisement -

ಇಂದು ಕನ್ನಡದ ಹಾಗೂ ಕನ್ನಡಿಗರ ಅನೇಕ ಸಮಸ್ಯೆಗಳು ನಮ್ಮ ಮುಂದಿವೆ. ಇತ್ತೀಚೆಗೆ ಭಾಷೆ ಸಮಸ್ಯೆ ಶುರುವಾಗಿದೆ. ಅಲ್ಲದೆ, ನಮ್ಮ ನದಿಗಳ ನೀರು ಉಪಯೋಗಿಸುವ ವಿಚಾರದಲ್ಲಿ ನಮ್ಮನ್ನು ಕೇಂದ್ರ ಸರಕಾರ ಲಘುವಾಗಿ ಪರಿಗಣಿಸುತ್ತಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದೇ ಹೋದರೆ ನಮ್ಮತನ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇಲ್ಲಿನ ಮಂತ್ರಿಗಳು, ಕೇಂದ್ರದ ಮಂತ್ರಿಗಳು ಕೇಂದ್ರದ ನೀತಿಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗಾದರೆ, ಕನ್ನಡದ ಬಗ್ಗೆ ಅವರ ನಿಲುವೇನು? ಯಾಕೆ ಹಿಂದಿ ಮೇಲೆ ಮೋಹ? ಕನ್ನಡದ ಮೇಲೆ ಯಾಕೆ ನಿರ್ಲಕ್ಷ್ಯ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು. ಇಂಥ ನಾಯಕರನ್ನು ಕನ್ನಡದ ದ್ರೋಹಿಗಳು ಎನ್ನದೆ ಇನ್ನೇನೆಂದು ಕರೆಯಬೇಕು ಎಂದು ಅವರು ಹೇಳಿದರು.

ನಮ್ಮ ನಾಡಗೀತೆಯಂತಹ ಗೀತೆಯನ್ನು ಬೇರೆ ಯಾವ ರಾಜ್ಯದಲ್ಲಿ ಕೂಡಾ ಕಾಣಲು ಸಾಧ್ಯವಿಲ್ಲ. ಹಲವಾರು ಪ್ರದೇಶ, ಬಾಷೆಗಳು ಸೇರಿ‌ ಒಕ್ಕೂಟ ರಾಷ್ಟ್ರವಾಗಿದೆ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತದ ಒಕ್ಕೂಟದ ವ್ಯವಸ್ಥೆ ಗೆ ಧಕ್ಕೆ ಆಗಿರಲಿಲ್ಲ. ಈಗ ಅದನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಖಾಸಗಿ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ಹಾಗಾಗಿ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ. ಕನ್ನಡ ಕಲಿತವರಲ್ಲಿ ಜ್ಞಾನ ಇದ್ದರೂ ಪ್ರೆಸೆಂಟೇಷನ್ ಬಗ್ಗೆ ಸ್ವಲ್ಪ ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಇಂಗ್ಲಿಷ್ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಹಿಂದಿ ಹೇರಿಕೆ ಏಕೆ? ಹಿಂದಿ ಹೇರಿಕೆ ಬಗ್ಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ನಾವು ಕೂಡ ಇದನ್ನು ಪ್ರತಿಭಟಿಸಬೇಕಾಗಿದೆ. ಎಂದು ಅವರು ಹೇಳಿದರು. ಕನ್ನಡದ ಸೋಗಡೇ ಬೇರೆ. ಕುವೆಂಪು ರಚಿಸಿದ ನಾಡಗೀತೆಯ ಸೊಗಬು ಬೇರೆ. ಅದು ಯಾವ ಭಾಷೆಯಲ್ಲಿಯೂ ಇಲ್ಲ ಎಂದರು.

ನೀರಾವರಿ ಅನ್ಯಾಯ:

ಕೇಂದ್ರ ಸರಕಾರ ನೀರಾವರಿ ಯೋಜನೆಗಳಲ್ಲಿ ನನಗೆ ಅನ್ಯಾಯ ಮಾಡುತ್ತಲೇ ಇದೆ. ಬೇರೆ ರಾಜ್ಯಗಳಲ್ಲಿ ಇಂಥ ಯೋಜನೆಗಳು ಬೇಗ ಬೇಗ ಕಾರ್ಯಗತ ಮಾಡುತ್ತಿವೆ. ಉದಾಹರಣೆಗೆ, ತೆಲಂಗಾಣದ ಶ್ರೀ‌ ಕಾಳೇಶ್ವರ ನೀರಾವರಿ ಯೋಜನೆಗೆ ಮೂರು‌ಸಾವಿರ ಕೋಟಿ ಮೀಸಲು ಇಟ್ಟು ಐದಾರು ವರ್ಷಗಳಲ್ಲಿ ಮುಗಿಸಲಾಗಿದೆ. ಆದರೆ, ನಮ್ಮ ಪಾವಗಢ ಭಾಗಕ್ಕೆ ನೀರೇ ಇಲ್ಲ. ಇಲ್ಲಿ ಯೋಜನೆಗಳು ನಿಧಾನ. ಪ್ರತಿ ವರ್ಷ ಬಜೆಟ್‌ನಲ್ಲಿ ಹಣ‌ ಮೀಸಲಿಟ್ಟ ಹಣ ಗುತ್ತಿಗೆದಾರರ ಪಾಲಾಗುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನೈಸ್ ರಸ್ತೆ ಅಕ್ರಮ ಬಿಚ್ಚಿಟ್ಟ ಹೆಚ್ ಡಿಕೆ:

ಜನರನ್ನು ಸುಲಿಗೆ ಮಾಡಿ ರಾಜ್ಯವನ್ನು ವಂಚಿಸುತ್ತಿರುವ ನೈಸ್ ರಸ್ತೆ ಹಗರಣವನ್ನು ಮಾಜಿ ಮುಖ್ಯಮಂತ್ರಿಗಳು ಬಿಡಿಸಿಟ್ಟರು. ಈಗ ಕಾಂಕ್ರೀಟ್ ರಸ್ತೆ ಮಾಡಲು ಹೊರಟಿದ್ದಾರೆ ಅದು ಕೂಡ ಗುಣಮಟ್ಟ ಇಲ್ಲ. ಅದನ್ನು ಪ್ರಶ್ನೆ ಮಾಡಿದರೆ ಸರ್ಕಾರದಿಂದ ಉತ್ತರ ಇಲ್ಲ. ಮೆಟ್ರೋ ಗೆ ಭೂಮಿ ಬೇಕಾಗಿದೆ. ಅದಕ್ಕೆ 100 ಕೋಟಿ ಕ್ಲೈಮ್ ಮಾಡಿಕೊಂಡು ಕೂತಿದ್ದಾರೆ ಎಂದರು ಕುಮಾರಸ್ವಾಮಿ.

ಸರ್ಕಾರಿ ಭೂಮಿಯನ್ನು ಬ್ಯಾಂಕುಗಳಿಗೆ ಒತ್ತೆ ಇಟ್ಟು ಸಾಲ ಮಾಡೋದು, ಆ ಹಣವನ್ನು ಕೆಐಡಿಬಿಗೆ ಕಟ್ಟೋದು ನಡೆದಿದೆ. ಇದನ್ನು ನಾನು ಸಿಎಂ ಆದಾಗ ಸ್ಕ್ರಾಪ್ ಮಾಡಲು ಹೋದೆ. ಆಗ ಮೈತ್ರಿ ಸರ್ಕಾರ ಇತ್ತು. ಈ ವಿಚಾರ ಎತ್ತಿದರೆ ನಾವು ಸಂಪುಟ ಸಭೆಗೆ ಬರಲ್ಲ ಎಂದು ಮಿತ್ರಪಕ್ಷ ಹೇಳಿತು ಎಂದು ಅವರು ಹೇಳಿದರು.

ಚಳ್ಳಗಟ್ಟ ಕೆರೆ 124 ಎಕರೆ ಯಾವ ರೇಟ್ ಗೆ ಕೊಟ್ಟಿದ್ದಾರೆ..? ಇವತ್ತು 10-15 ಸಾವಿರ ಕೋಟಿ ಬೆಲೆ ಬಾಳುತ್ತದೆ ಆ ಭೂಮಿ. ಯಾರೋ ಮಜಾ ಮಾಡಲು ಅದನ್ನು ಕೊಡಲಾಗಿದೆ. ಚಳ್ಳಘಟ್ಟ ಕೆರೆ ಯನ್ನು ಗಾಲ್ಪ್ ಕೋರ್ಟ್ ಗೆ ಎಷ್ಟಕ್ಕೆ ಕೊಟ್ಟಿದ್ದಾರೆ.ವರ್ಷಕ್ಕೆ ಒಂದು ಎಕರೆಗೆ ಒಂದು ರುಪಾಯಿಗೆ ಕೊಟ್ಟಿದ್ದಾರೆ, 30 ವರ್ಷಕ್ಕೆ ಲೀಸ್ ಗೆ ಕೊಟ್ಟಿದ್ದಾರೆ.0ಯಾರೋ ಒಂದಿಬ್ಬರು ಐ ಎ ಎಸ್ ಆಫೀಸರ್ ಗಳು ಮಜಾ ಮಾಡಲಿಕ್ಕೆ ಇದನ್ನು ಬಿಟ್ಟು ಕೊಟ್ಟಿದ್ದಾರೆ.=ಇವೆಲ್ಲಾ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳು ಎಂದು ಅವರು ಕಿಡಿ ಕಾರಿದರು.

ಕರವೇ ಅಧ್ಯಕ್ಷ ಶಿವರಾಮೇಗೌಡರು, ರೈತ ಹೋರಾಟಗಾರ ಪಚ್ಚೆ ನಂಜುಂಡ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.



Join Whatsapp