ನವದೆಹಲಿ: ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡರ ಜೀವನ ಆಧಿರಿಸಿ ಹಿರಿಯ ಪತ್ರಕರ್ತ ಸುಗತಾ ಶ್ರೀನಿವಾಸರಾಜು ಅವರು ಬರೆದಿರುವ ‘ಫರೋಸ್ ಇನ್ ಎ ಫೀಲ್ಡ್: ದಿ ಅನ್’ಎಕ್ಸ್’ಪ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ (Furrows in a Field: The Unexplored Life of H.D. Deve Gowda) ಕೃತಿಯನ್ನು ದೇಶದ ಖ್ಯಾತ ನ್ಯಾಯವಾದಿಗಳಾದ ಫಾಲಿ ಎಫ್ ನಾರಿಮನ್ ಅವರು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು.
ದೆಹಲಿಯ ಮಲ್ಟಿಪರ್ಪಸ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಆನ್ಲೈನ್ ವೇದಿಕೆಯ ಮೂಲಕ ಫಾಲಿ ಎಫ್ ನಾರಿಮನ್, ದೇವೇಗೌಡರ ಸಮಕ್ಷಮದಲ್ಲಿ ಕೃತಿಯನ್ನು ಬಿಡುಗಡೆ ಮಾಡಿದರು.
ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಮಜಲುಗಳನ್ನು ಮೆಲುಕು ಹಾಕಿದ ನಾರಿಮನ್, ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ಜಲವಿವಾದಗಳ ಬಗ್ಗೆ ಗೌಡರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಉಲ್ಲೇಖ ಮಾಡಿದರು.
60 ವರ್ಷಗಳ ಸುದೀರ್ಘ ರಾಜಕೀಯ ಜೀವನವುಳ್ಳ ದೇವೇಗೌಡರನ್ನು ಪುಸ್ತಕದಲ್ಲಿ ದೊಡ್ಡ ಜೀವ ಎಂದು ಕರೆಯಲಾಗಿದೆ. ದೊಡ್ಡ ಜೀವದ ಜತೆ ಸಂಭ್ರಮಿಸುತ್ತಿದ್ದೇವೆ ಎಂದು ಬರೆಯಲಾಗಿದೆ. ಆದರೆ ತಾವು ರಾಜಕೀಯ ಜೀವನ ಆರಂಭಿಸಿದಾಗ ಅವರಿಗೆ ತಾವೊಬ್ಬ ದೊಡ್ಡ ಜೀವ ಆಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಆದರೆ ದೇವೇಗೌಡರು ಹಾಗೆ ಬೆಳೆದು ಸಾಧಿಸಿದರು ಎಂದು ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.
1962ರಲ್ಲಿ ಪಕ್ಷೇತರ ಶಾಸಕರಾಗಿ ರಾಜ್ಯ ವಿಧಾನಸಭೆಗೆ ಕಾಲಿಟ್ಟ ಕೂಡಲೇ ದೇವೇಗೌಡರು ಪ್ರಸ್ತಾಪ ಮಾಡಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ. ಜತೆಗೆ ಒಂದು ನಿರ್ಣಯವನ್ನೂ ಮಂಡಿಸಿದರು. ಅದಾದ ಮೇಲೆ ಕರ್ನಾಟಕ ಸರಕಾರವು ಕಾವೇರಿ ಕೊಳ್ಳದ ತನ್ನ ಪಾಲಿನ ನೀರನ್ನು ಸಮರ್ಪಕವಾಗಿ ಬಳಿಸಿಕೊಳ್ಳುವ ನಿರ್ಧಾರ ಕೈಗೊಂಡಿತು ಎಂದು ಅವರು ವಿವರಿಸಿದರು.
ಇಷ್ಟೇ ಅಲ್ಲದೆ, ರಾಜ್ಯದಲ್ಲಿ ಬಲಿಷ್ಠ ಸಮುದಾಯಗಳ ನಡುವೆ ನಡೆಯುತ್ತಿದ್ದ ರಾಜಕೀಯ ಮೇಲಾಟ, ಕೊನೆಗೆ ಹೋರಾಟಕ್ಕೆ ಮನ್ನಣೆ ಸಿಕ್ಕಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾದ ಘಟನಾವಳಿಗಳ ಬಗ್ಗೆ ನಾರಿಮನ್ ಅವರು ಪ್ರಸ್ತಾಪ ಮಾಡಿದರು.
ಫಾರೂಕ್ ಅಬ್ದುಲ್ಲಾ ಕಂಬನಿ:
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು; ಕಣೆವೆಯಲ್ಲಿ ಬಹಳ ದುಸ್ತರ ಸಂದರ್ಭವಿದ್ದ ವೇಳೆಯಲ್ಲಿ ಗೌಡರು ಈ ದೇಶದ ಪ್ರಧಾನಿ ಆಗಿದ್ದರು. ಆಗ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ವಿಪರೀತ ವಿಷಮವಾಗಿತ್ತು ಎಂದರು.
ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಗೌಡರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅನೇಕ ಸಲ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅಂಥ ಕಠಿಣ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಗೌಡರು ನಿರ್ವಹಿಸಿದ ರೀತಿ ಕೆಚ್ಚೆದೆಯಿಂದ ಕೂಡಿತ್ತು. ಆಗ ದೇವೇಗೌಡರು ಜಮ್ಮು ಕಾಶ್ನೀರಕ್ಕೆ ಭೇಟಿ ನೀಡಿದರು. ಅದು ನನ್ನ ಪಾಲಿಗೆ ಹೊಸ ಆರಂಭ. ಆಗ ಗೌಡರ ದೃಢ ನಿರ್ಧಾರದಿಂದ ಅಷ್ಟು ವಿಷಮ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದು ನಾನು ಅಧಿಕಾರಕ್ಕೆ ಬಂದೆ ಎಂದು ಫಾರೂಕ್ ಅಬ್ದುಲ್ಲಾ ಅವರು ಗದ್ಗದಿತರಾದರು.
ಈ ಕಾರಣಕ್ಕೆ ಜಮ್ಮು, ಕಾಶ್ಮೀರ, ಲಡಾಖ್ ಜನರು ಎಂದೆಂದಿಗೂ ದೇವೇಗೌಡರಿಗೆ ಋಣಿಯಾಗಿರುತ್ತಾರೆಂದು ಅವರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಹೇಳಿದರು. ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್,. ಸಿಪಿಎಂ ಮುಖಂಡ ಸೀತಾರಾಂ ಯೆಚೂರಿಯವರು ಗೌಡರ ಜತೆಗಿನ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದರು. ಲೇಖಕ ಸುಗತಾ ಶ್ರೀನಿವಾಸ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವೇಗೌಡರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ, ಜನರಲ್ ಧಿಲ್ಲೋನ್, ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶ್ರೀಮತಿ ಚನ್ನಮ್ಮ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News