ಬೆಂಗಳೂರು: “ರಸ್ತೆ ಕಾಮಗಾರಿ ನಡೆಸಿರುವುದಕ್ಕೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ಈಚೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿದೆ. ಕಾಮಗಾರಿ ಪೂರ್ಣಗೊಳಿಸಿದರೂ ಏಕೆ ಹಣ ನೀಡಲು ವಿಳಂಬ ಮಾಡಲಾಗುತ್ತಿದೆ? ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಇನ್ನೆಷ್ಟು ಜನ ಸಾಯಬೇಕಿದೆ?” ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಕಟುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗೆ ಗುತ್ತಿಗೆ ಹಣ ನೀಡಲಾಗಿಲ್ಲ ಎಂದು ಆಕ್ಷೇಪಿಸಿ ಬಿ ಬಿ ಉಮೇಶ್ ಹಾಗೂ ಮತ್ತಿತರರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಪೀಠವು ನಡೆಸಿತು.
“ಅರ್ಜಿದಾರರು ಕಾಮಗಾರಿ ಪೂರ್ಣಗೊಳಿಸಿದ್ದರೂ ಅವರಿಗೆ ಏಕೆ ಇನ್ನೂ ಹಣ ಪಾವತಿ ಮಾಡಿಲ್ಲ ಎಂಬ ಬಗ್ಗೆ ಗುರುವಾರ ಸೂಕ್ತ ವಿವರಣೆ ನೀಡಬೇಕು. ತಪ್ಪಿದರೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸಲಾಗುವುದು” ಎಂದು ಪಾಲಿಕೆ ಪರ ವಕೀಲರಿಗೆ ಸೂಚಿಸಿ ಪೀಠವು ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಅರ್ಜಿದಾರರು ಬಿಎಂಪಿಯಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರ್ಣಗೊಳಿಸಿ, ಆ ಬಗ್ಗೆ ಪ್ರಮಾಣ ಪತ್ರ ಸಹ ಪಡೆದುಕೊಂಡಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಅರ್ಜಿದಾರರಿಗೆ ಹಣ ಪಾವತಿ ಮಾಡುತ್ತಿಲ್ಲ” ಎಂದು ಪೀಠದ ಗಮನಕ್ಕೆ ತಂದರು.
ಇದರಿಂದ ಬಿಬಿಎಂಪಿ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಾಲಯವು “ಗುತ್ತಿಗೆ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿದೆ. ಕಾಮಗಾರಿ ಪೂರ್ಣಗೊಳಿಸಿದರೂ ಏಕೆ ಹಣ ನೀಡಲು ವಿಳಂಬ ಮಾಡಲಾಗುತ್ತಿದೆ. ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ” ಎಂದು ಕಟುವಾಗಿ ನುಡಿಯಿತು.
ಒಂದೊಮ್ಮೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಯಲ್ಲಿ ಲೋಪವಿದ್ದರೆ ಅದು ಬೇರೆ ಮಾತು. ಆದರೆ, ಕಾಮಗಾರಿ ಪೂರ್ಣಗೊಂಡ ಬಗ್ಗೆ ದಾಖಲೆ ಇದ್ದರೂ ಹಣ ಪಾವತಿಸದೇ ಇರುವುದನ್ನು ಒಪ್ಪಲಾಗದು. ಇನ್ನೆಷ್ಟು ಗುತ್ತಿಗೆದಾರರು ಸಾಯಬೇಕು ಎಂದುಕೊಂಡಿದ್ದೀರಿ? ಈ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ. ತಾರ್ಕಿಕ ಅಂತ್ಯ ಕಾಣಿಸಲೇಬೇಕು ಎಂದು ಪೀಠ ನುಡಿಯಿತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)