ಅಹಮದಾಬಾದ್: ಮುಸ್ಲಿಮ್ ಯುವಕನ ವಿರುದ್ಧ ಲವ್ ಜಿಹಾದ್ ವಿರೋಧಿ ಕಾನೂನಿನಡಿಯಲ್ಲಿ ಗುಜರಾತ್ ಪೊಲೀಸರು ದಾಖಲಿಸಿದ್ದ ಮೊದಲ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ದಂಪತಿಯ ಘೋಷಕರು ಮತ್ತು ಧಾರ್ಮಿಕ ಮುಖಂಡರು ಸೇರಿಕೊಂಡಿ ಈ ವಿಚಾರವನ್ನು ತಮ್ಮಲ್ಲೇ ಬಗೆಹರಿಸಿಕೊಂಡರು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತಷ್ಟು ಮುಂದುವರಿಸುವುದು ಕಕ್ಷಿದಾರರಿಗೆ ಅನಗತ್ಯ ಕಿರುಕುಳ ನೀಡಿದಂತಾಗಿದೆ ಎಂದು ನ್ಯಾಯಾಲಯ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಮೂರ್ತಿ ನಿರಲ್ ಆರ್. ಮೆಹ್ತಾ ಅವರು ಪ್ರಕರಣದಿಂದ ಉಂಟಾಗುವ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ್ದಾರೆ.
ಪತಿ ಸಮೀರ್, ಆತನ ಪೋಷಕರು ಮತ್ತು ಧಾರ್ಮಿಕ ಮುಖಂಡರು ಸೇರಿಕೊಂಡು ತನ್ನನ್ನು ವಿವಾಹದ ಮೂಲಕ ಬಲವಂತವಾಗಿ ಧರ್ಮವನ್ನು ಪರಿವರ್ತಿಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದರು.
ಈ ದೂರಿನನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498 ಎ, 376(2) (n), 377, 312, 313, 504, 506(2), 323, 419, 120B ಮತ್ತು ಗುಜರಾತಿ ಧಾರ್ಮಿಕ ಸ್ವಾತಂತ್ರ್ಯತಿದ್ದುಪಡಿ ಕಾಯ್ದೆ 2021 ಸೆಕ್ಷನ್ 4, 4(A), 4(2)(A), 4(2)(B) and 5 3(1)(r)(s), 3(2)(5), 3 (2)(5-a), 3(1)(w)(1)(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಮಧ್ಯೆ ಪ್ರಸಕ್ತ ವಿಚಾರವನ್ನು ಕಕ್ಷಿದಾರರ ನಡುವೆ ಸೌಹಾರ್ದತೆಯುತವಾಗಿ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪತ್ನಿ ಮತ್ತು ಆರೋಪಿಗಳು ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯದಿಂದ ಈ ಆದೇಶ ಬಂದಿದೆ.
ಬಲವಂತದ ಮತಾಂತರದ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ತಪ್ಪು ಮತ್ತು ಸುಳ್ಳು ಸಂಗತಿಗಳನ್ನು ಒಳಗೊಂಡಿತ್ತು ಎಂದು ಮಹಿಳೆ HC ಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.