ಬೆಂಗಳೂರು: 2024ರ ಚುನಾವಣೆಯ ಬಳಿಕ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದ ಸಚಿವ ಉಮೇಶ್ ಕತ್ತಿ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ಎಚ್ ಸಿ ಮಹದೇವಪ್ಪ, ಉತ್ತರ ಕರ್ನಾಟಕದ ಯೋಜನೆಗಳನ್ನು ವಾಪಸ್ ಕಳಿಸಿರುವ ನಿಮ್ಮ ಪಕ್ಷಕ್ಕೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಹದೇವಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿಡಿದು ಎಷ್ಟೋ ಮಂದಿ ಕನ್ನಡ ಹೋರಾಟಗಾರರು ಸಂವಿಧಾನಾತ್ಮಕ ಗಣರಾಜ್ಯವಾಗಿದ್ದ ಭಾರತದಲ್ಲಿ ಕರ್ನಾಟಕವೂ ಕೂಡಾ ಭಾಷಾವಾರು ಪ್ರಾಂತ್ಯವಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ 1956 ರ ನವೆಂಬರ್ 1ರಂದು ನಮ್ಮ ರಾಜ್ಯವು ಆಡಳಿತ ವ್ಯಾಪ್ತಿಗೆ ಬಂದಿತು. 1973 ನವೆಂಬರ್ 1 ರಂದು ಕರ್ನಾಟಕ ಎಂದು ಪುನರ್ ನಾಮಕರಣಗೊಂಡಿತು ಎಂದು ನೆನಪಿಸಿದ್ದಾರೆ.
ಹೋರಾಟದ ಇತಿಹಾಸ ಇರುವ ಕರ್ನಾಟಕವನ್ನು ಲೋಕಸಭೆಯ ಚುನಾವಣೆ ನಂತರದಲ್ಲಿ ವಿಭಜಿಸುವ ಕುರಿತು ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ಅವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಡಬಲ್ ಇಂಜಿನ್ ಸರ್ಕಾರದ ಹೆಸರಲ್ಲಿ ಅಧಿಕಾರದಲ್ಲಿದ್ದರೂ ಕೂಡಾ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟು, ಇಲ್ಲಿಗೆ ಬಂದ ಯೋಜನೆಗಳನ್ನೆಲ್ಲಾ ವಾಪಸ್ ಕಳಿಸಿರುವ ಇವರಿಗೆ ಪ್ರತ್ಯೇಕ ರಾಜ್ಯದ ಕುರಿತಂತೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.
ಈ ಹಿಂದೆ ಕನ್ನಡ ಹೋರಾಟಗಾರರ ಬಂಧನವಾದಾಗ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ ಅವರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಇದೀಗ ಅವರ ಪುತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಮತ್ತು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ ಉಮೇಶ್ ಕತ್ತಿಯವರ ಮೇಲೆ ಕ್ರಮ ವಹಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಂಡು 40% ಕಮಿಷನ್ ಲೂಟಿಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಅಭಿವೃದ್ಧಿಯನ್ನೇ ಮಾಡದೇ ಕೇವಲ ಅಧಿಕಾರದ ದುರಾಸೆಗಾಗಿ ರಾಜ್ಯದ ವಿಭಜನೆಯ ಬಗ್ಗೆ ಮಾತನಾಡುತ್ತಿರುವುದನ್ನು ಪ್ರತಿಯೊಬ್ಬ ಕನ್ನಡಿಗರೂ ಕೂಡಾ ಖಂಡಿಸಬೇಕು ಎಂದು ಎಚ್ ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.