ಹೈಕೋರ್ಟ್ ಮಧ್ಯಪ್ರವೇಶ: ಹತ್ತು ವರ್ಷಗಳ ನಂತರ ಒಂದಾದ ದಂಪತಿ

Prasthutha|

ಧಾರವಾಡ:   ಇಲ್ಲಿನ  ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯು ಹತ್ತು ವರ್ಷಗಳಿಂದ ದೂರವಾಗಿದ್ದ ದಂಪತಿಯನ್ನು ಪರಸ್ಪರ ಒಂದುಗೂಡಿಸಿದೆ.

- Advertisement -

 ಧಾರವಾಡದ ಸುಜಾತಾ ಹಾಗೂ ಶಿವಮೊಗ್ಗದ  ದೀಪಕ ದಿನಕರ  ದಂಪತಿ  ಭಿನ್ನಾಭಿಪ್ರಾಯಗಳಿಂದ ಪರಸ್ಪರ ಹತ್ತು ವರ್ಷಗಳಿಂದ ದೂರವಾಗಿದ್ದರು. ಪತಿ ದೀಪಕ್ ಅವರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ‌  ಅರ್ಜಿ ಸಲ್ಲಿಸಿದ್ದರು. ನಿರಾ ಎಂಬ 11 ವರ್ಷದ ಹೆಣ್ಣು ಮಗಳಿರುವ ಈ ದಂಪತಿಯನ್ನು ನ್ಯಾಯಮೂರ್ತಿಗಳ ಸಲಹೆ ಮೇರೆಗೆ  ಮಧ್ಯಸ್ಥಿಕೆಗಾರರ ಎದುರು ಹಾಜರು ಪಡಿಸಲಾಯಿತು. ಉಭಯ ಪಕ್ಷಗಾರರ ಸಂಬಂಧಿಕರು, ಉಭಯ ಪಕ್ಷಗಾರರ ವಕೀಲರಾದ ಎಸ್.ಆರ್ . ಹೆಗಡೆ ಮತ್ತು ಗಿರೀಶ ಹಿರೇಮಠ ಹಾಗೂ ಮಧ್ಯಸ್ಥಗಾರರಾದ ಹನುಮಂತರೆಡ್ಡಿ ಸಾವ್ಕಾರ ಅವರ  ಹಿತವಚನದ ಮೇರೆಗೆ, ಮುಂದಿನ ದಾಂಪತ್ಯ ಜೀವನ, ಭವಿಷ್ಯ ಹಾಗೂ ಮಗಳ ಜೀವನದ ನಿರ್ವಹಣೆಯ ಸದುದ್ದೇಶವನ್ನು ಇಟ್ಟುಕೊಂಡು ರಾಜಿ ಮಾಡಿಕೊಂಡರು. 

 ಒಂದಾದ ದಂಪತಿಯನ್ನು ನ್ಯಾಯಧೀಶರಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಪಿ . ಕೃಷ್ಣ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ದಂಪತಿ ಮತ್ತೆ ಒಂದಾಗಿರುವುದರ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು. ದಂಪತಿ ಇಂದು ಜೊತೆಯಾಗಿ  ಶಿವಮೊಗ್ಗದಲ್ಲಿರುವ ಪತಿಯ ಮನೆಗೆ ತೆರಳಿದರು ಎಂದು ಹೈಕೋರ್ಟ್ ಪೀಠದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp