ಹಿಜಾಬ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್: ಸಂವಿಧಾನವು ನನಗೆ ಭಗವದ್ಗೀತೆಗಿಂತ ಹೆಚ್ಚು ಎಂದ ನ್ಯಾಯಮೂರ್ತಿ

Prasthutha|

ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

- Advertisement -


ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೀಕ್ಷಿತ್ ಆರಂಭದಲ್ಲಿ ಅರ್ಜಿಯ ವಿಚಾರಣೆ ಆರಂಭಿಸಿ, ಎಲ್ಲ ರೀತಿಯ ಭಾವನೆಗಳನ್ನು ಬದಿಗೆ ಸರಿಸೋಣ. ಸಂವಿಧಾನದ ಮೇಲೆ ನಾನು ತೆಗೆದುಕೊಂಡಿರುವ ಪ್ರಮಾಣದಂತೆ ನಡೆದುಕೊಳ್ಳಲಿದ್ದೇನೆ. ಬೇರೆಲ್ಲಾ ಪ್ರಶ್ನೆಗಳನ್ನು ಹೊರಗಿರಿಸಿ, ಸಂವಿಧಾನ ಏನು ಹೇಳುತ್ತದೆಯೋ ಅದರಂತೆ ನಡೆಯೋಣ. ಸಂವಿಧಾನವು ನನಗೆ ಭಗವದ್ಗೀತೆಗಿಂತ ಹೆಚ್ಚು ಎಂದು ಹೇಳಿದರು.


ಹಿರಿಯ ವಕೀಲ ದೇವದತ್ ಕಾಮತ್ ಅರ್ಜಿದಾರರ ಪರ ವಾದ ಮಂಡಿಸಿ, ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದ ಸಂಪ್ರದಾಯ. ನಮ್ಮ ಮೊದಲ ಕೋರಿಕೆ, ಶಿರವಸ್ತ್ರ ಅಥವಾ ಹಿಜಾಬ್ ಧರಿಸುವುದು. ಪವಿತ್ರ ಕುರಾನ್ ಪ್ರಕಾರ ಇದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ ಎಂದು ಹೇಳಿದರು.
ಅರ್ಜಿದಾರರ ಪರ ವಕೀಲ ಮುಹಮ್ಮದ್ ತಾಹೀರ್ ಅವರು ಸರ್ಕಾರದ ಸುತ್ತೋಲೆಯನ್ನು ಓದಿ, ಪೀಠದ ಗಮನಕ್ಕೆ ತಂದರು.ನ್ಯಾಯವಾದಿ ಕಾಮತ್ ಅವರು ವಾದ ಮುಂದುವರಿಸಿ, ಪುಟ್ಟಸ್ವಾಮಿ ಪ್ರಕರಣದಲ್ಲಿ ಖಾಸಗಿ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು. ವಸ್ತ್ರಧರಿಸುವ ಹಕ್ಕು ಇದರಡಿಯೇ ಬರುತ್ತದೆ. ಇಷ್ಟವಿರುವ ಬಟ್ಟೆ ಧರಿಸುವುದು ಸಂವಿಧಾನದ 19(ಎ) ಅಡಿ ನೀಡಿರುವುದಾಗಿದ್ದು 19(6) ಅಡಿ ಮಾತ್ರವೇ ಅದನ್ನು ನಿರ್ಬಂಧಿಸಬಹುದು. ಅಭಿವ್ಯಕ್ತಿಯ ಸ್ವಾತಂತ್ರ್ಯವು ಏನನ್ನು ಧರಿಸಬಹುದು ಎನ್ನುವುದನ್ನು ಒಳಗೊಳ್ಳುತ್ತದೆ ಎಂದರು.

- Advertisement -


ಇದೇ ವೇಳೆ ನ್ಯಾಯಾಲಯವು ನ್ಯಾಯಮೂರ್ತಿಗಳಿಗೆ ನೀಡಲಾದ ಗ್ರಂಥಾಲಯದಿಂದ ತಂದ ಕುರಾನ್ ನ ಪ್ರತಿಯು ಅಧಿಕೃತ ಪ್ರತಿಯೇ ಎಂದು ಖಚಿತಪಡಿಸಿಕೊಳ್ಳಲು ಮುಂದಾಯಿತು.
ಸರ್ಕಾರದ ಆದೇಶವು ಕರ್ನಾಟಕ ಶಿಕ್ಷಣ ನಿಯಮಾವಳಿಗಳ ವ್ಯಾಪ್ತಿಯ ಅಚೆಗಿದೆ. ಹಾಗಾಗಿ ಅದು ಇಂತಹ ಆದೇಶ ಹೊರಡಿಸುವ ವ್ಯಾಪ್ತಿಯನ್ನು ಹೊಂದಿಲ್ಲ. ಈ ಹಿಂದಿನ ಅದೇಶವೊಂದನ್ನು ನ್ಯಾಯಾಲಯದ ಮುಂದಿರಿಸಿದ ಕಾಮತ್. ಸರ್ಕಾರವು ಯಾವುದು ಧರ್ಮದ ಅಗತ್ಯ ಅಚಾರ, ಯಾವುದಲ್ಲ ಎನ್ನುವುದನ್ನು ಹೇಳಲಾಗದು. ಅದು ನ್ಯಾಯಾಂಗದ ಪರಿಮಿತಿಗೆ ಬರುವಂಥದ್ದು. ಆಚರಣೆಯೊಂದು ಧರ್ಮಕ್ಕೆ ಅಗತ್ಯವೇ ಎನ್ನುವುದಕ್ಕೆ ಅಂತಿಮವಾಗಿ ಇದೆಲ್ಲವೂ ಬರುತ್ತದೆ. ಒಂದು ವೇಳೆ ಧರ್ಮವೊಂದು ಮಹಿಳೆಯನ್ನು ಅರ್ಚಕರಾಗಿ ಬಯಸುವುದಿಲ್ಲ ಎಂದರೆ ಆಗ ಸರ್ಕಾರವು ಅದನ್ನು ಹೇರಲಾಗದು ಎಂದರು.


ಇಲ್ಲಿ ಪರೀಕ್ಷೆ ಎಂದರೆ, ಅಂತಹ ಆಚರಣೆಯನ್ನು ಧರ್ಮದಿಂದ ಹೊರಗಿಟ್ಟರೆ ಆಗ ಅಂತಹ ಧರ್ಮದ ಮೂಲರಚನೆಯಲ್ಲಿ ವ್ಯತ್ಯಾಸವಾಗುತ್ತದೆಯೇ ಎನ್ನುವುದು. ಧಾರ್ಮಿಕ ಆಚರಣೆಗಳನ್ನು ಧಾರ್ಮಿಕ ಅಧಿಕಾರದಿಂದ ಹೊರತಾದ ಜಾತ್ಯತೀತ ತತ್ವಗಳಿಂದ ಪರೀಕ್ಷಿಸಲಾಗದು. ಹಾಗಾಗಿ, ಧರ್ಮಕ್ಕೆ ಏನು ಅಗತ್ಯ ಏನಲ್ಲ ಎನ್ನುವುದನ್ನು ನಮ್ಮ ಜಾತ್ಯತೀತ ಆಲೋಚನೆಗಳು ನಿರ್ಧರಿಸಲಾಗದು ಎಂದರು.
ಋತುಮತಿಯಾದ ನಂತರ ಹೆಣ್ಣು ತನ್ನ ಮುಖ ಹಾಗೂ ಕೈಗಳನ್ನು ಅಪರಿಚಿತರಿಗೆ ತೋರಿಸುವುದು ಸರಿಯಲ್ಲ. ಕೇರಳ ಹೈಕೋರ್ಟ್ ತೀರ್ಪಿನಲ್ಲಿರುವ ಹದೀಸ್ ಒಂದನ್ನು ಉಲ್ಲೇಖಿಸಿ ಕಾಮತ್ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.



Join Whatsapp