ನಟ ಅಲ್ಲು ಅರ್ಜುನ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

Prasthutha|

ಅಮರಾವತಿ: ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ಸದ್ಯ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

- Advertisement -

ಚುನಾವಣಾ ನಿಯಮ ಉಲ್ಲಂಘಿಸಿದ್ದಾರೆ ಎಂದು ನಟನ ವಿರುದ್ಧ ನಂದ್ಯಾಲ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅಲ್ಲು ಅರ್ಜುನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಮಾಜಿ ಶಾಸಕಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಕೂಡ ಮನವಿ ಸಲ್ಲಿಸಿದ್ದರು.

ಈ ಅರ್ಜಿಗಳ ಮೇಲಿನ ವಾದಗಳನ್ನು ಆಲಿಸಿದ ಹೈಕೋರ್ಟ್ ನವೆಂಬರ್ 6ರಂದು ತೀರ್ಪು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದರೆ ಅಲ್ಲಿಯವರೆಗೆ ಎಫ್ ಐಆರ್ ಆಧಾರದಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಮುಂದಿನ ಕ್ರಮಕೈಗೊಳ್ಳದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

- Advertisement -

ಅರ್ಜಿಯ ವಾದದ ಸಮಯದಲ್ಲಿ ಅರ್ಜುನ್ ಪರ ವಕೀಲ ವೈ ನಾಗಿ ರೆಡ್ಡಿ ಅವರು, ನಟನ ನಂದ್ಯಾಲ್ ಭೇಟಿ ವೈಯಕ್ತಿಕ ವಿಚಾರವಾಗಿದೆ. ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದರು. ಶಿಲ್ಪಾ ಅವರ ನಿವಾಸದ ಹೊರಗೆ ನೆರೆದಿದ್ದ ಜನಸಮೂಹಕ್ಕೆ ನಟನನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲದಿರುವಾಗ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ಏನಿದು ಪ್ರಕರಣ
ಈ ವರ್ಷ ಆಂಧ್ರಪ್ರದೇಶ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಗಳು ಏಕಕಾಲದಲ್ಲಿ ನಡೆದಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಜಂಟಿ ಕರ್ನೂಲ್ ಜಿಲ್ಲೆಯ ನಂದ್ಯಾಲದಲ್ಲಿರುವ ತಮ್ಮ ಸ್ನೇಹಿತೆ ಶಿಲ್ಪಾ ರವಿಚಂದ್ರ ರೆಡ್ಡಿ ಅವರ ನಿವಾಸಕ್ಕೆ ಅಲ್ಲು ಅರ್ಜುನ್ ತೆರಳಿದ್ದರು. ಬೃಹತ್ ಬೆಂಗಾವಲು ಪಡೆಯಲ್ಲಿ ಅಲ್ಲು ಅರ್ಜುನ್ ಶಾಸಕರ ಮನೆಗೆ ತಲುಪಿದ್ದಾರೆ. ಆ ಸಮಯದಲ್ಲಿ ಚುನಾವಣಾ ನಿಯಮ ಉಲ್ಲಂಘನೆ ಆರೋಪದಡಿ, ನಂದ್ಯಾಲ ಪೊಲೀಸರು ಸೆಕ್ಷನ್ 144 ಮತ್ತು ಪೊಲೀಸ್ ಕಾಯಿದೆ 30 ಅನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು.



Join Whatsapp