ಮಳಲಿ ಮಸೀದಿ ಕೇಸ್: ಮುಸ್ಲಿಮರ ದಾವೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Prasthutha|

ಬೆಂಗಳೂರು: ದಕ್ಷಿಣ ಕನ್ನಡದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಮೂಲ ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿರುವ ಮಂಗಳೂರಿನ ಸಿವಿಲ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಧನಂಜಯ್ ಮತ್ತು ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.

- Advertisement -

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಜೂನ್ 24ರಂದು ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದೆ
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಕಮಿಷನರ್ ನೇಮಕ ಮಾಡಿ ಸ್ಥಳ ಪರಿಶೀಲನೆಗೆ ಅವಕಾಶ ನೀಡಲಾಗಿದ್ದು, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿರುವ ಕುರಿತು ಪರಿಶೀಲನೆ ನಡೆಸಲು ಕಮಿಷನರ್ ನೇಮಕ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಮಸೀದಿಯ ಒಳಗೆ ದೇವಾಲಯವಿತ್ತೋ, ಇಲ್ಲವೋ ಎಂಬ ಕುರಿತ ಸಾಕ್ಷಾಧಾರಗಳನ್ನು ಸ್ಥಳ ಸಮೀಕ್ಷೆ ನಡೆಸಿಯೇ ಸಂಗ್ರಹಿಸಬೇಕಿದೆ. ಈ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ತಂತ್ರಜ್ಞಾನದ ಮೂಲಕ ಮಾತ್ರ ಇದು ಸಾಧ್ಯವಾಗಲಿದೆ. ಆದ್ದರಿಂದ, ಮಳಲಿ ಮಸೀದಿಯ ಪರಿಶೀಲನೆಗಾಗಿ ಕಮಿಷನರ್ ನೇಮಕ ಮಾಡುವ ಅಗತ್ಯವಿದೆ” ಎಂದು ಪೀಠಕ್ಕೆ ವಿವರಿಸಿದ್ದರು.

- Advertisement -

“ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಯಾದಾಗಲೂ ಆ ಅರ್ಜಿಯ ವಿಚಾರಣಾ ಮಾನ್ಯತೆಯ ಕುರಿತು ಪ್ರಶ್ನೆ ಎದುರಾಗಿತ್ತು. ಆದರೆ, ನ್ಯಾಯಾಲಯ ಮೊದಲು ಸ್ಥಳಪರಿಶೀಲನೆ ನಡೆಯಲಿ, ಅರ್ಜಿಯ ವಿಚಾರಣಾ ಮಾನ್ಯತೆ ಕುರಿತು ಮುಂದೆಯೂ ವಿಚಾರಣೆ ನಡೆಸಬಹುದು ಎಂದು ತಿಳಿಸಿ ಕಮಿಷನರ್ ನೇಮಕ ಮಾಡಿತ್ತು. ವಿಶೇಷ ಸಂದರ್ಭಗಳಲ್ಲಿ ಆರಂಭಿಕ ಹಂತದಲ್ಲೇ ಕಮಿಷನರ್ ನೇಮಕ ಮಾಡಬಹುದು. ಮೊದಲು ಪುರಾವೆಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿಡಬೇಕು. ಆದ್ದರಿಂದ, ಮಳಲಿ ಮಸೀದಿ ವಿಚಾರದಲ್ಲೂ ಜ್ಞಾನವಾಪಿ ಮಸೀದಿ ಪ್ರಕರಣದಂತೆ ಅರ್ಜಿಯ ವಿಚಾರಣಾ ಮಾನ್ಯತೆಯ ವಿಷಯವನ್ನು ಬದಿಗಿರಿಸಿ, ಕಮಿಷನರ್ ನೇಮಕ ಮಾಡಬೇಕು. ಈ ಕುರಿತು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು” ಎಂದು ಕೋರಿದ್ದರು.

“ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯು ಈ ಮಸೀದಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಮಸೀದಿಯವರೇ ಹೇಳಿರುವ ಪ್ರಕಾರ ಅದು 700ಕ್ಕೂ ಅಧಿಕ ವರ್ಷಗಳಷ್ಟು ಹಳೆಯದಾಗಿದೆ. ಅಲ್ಲಿ 1500ಕ್ಕೂ ಅಧಿಕ ವರ್ಷಗಳ ಹಳೆಯ ದೇವಾಲಯವಿದೆ ಎಂದು ಹಿಂದೂಗಳು ಹೇಳುತ್ತಿದ್ದಾರೆ. ಪ್ರಾಚೀನ ಸ್ಮಾರಕಗಳ ಕಾಯಿದೆ-1958ರ ಪ್ರಕಾರ 100 ವರ್ಷಕ್ಕಿಂತ ಹಳೆಯ ಕಟ್ಟಡಗಳು ಪುರಾತನ ಸ್ಮಾರಕವೆನಿಸಿಕೊಳ್ಳಲಿದ್ದು, ಆ ಕಟ್ಟಡಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.

ಮಸೀದಿಯ ಅಧ್ಯಕ್ಷರ ಪರ ವಾದಿಸಿದ್ದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು “ಮೂಲ ದಾವೆಯನ್ನು ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ನಿರ್ಧಾರವಾಗುವ ಮೊದಲು ಕಮಿಷನರ್ ವರದಿ ಅಗತ್ಯವಿಲ್ಲ. ಒಂದು ವೇಳೆ, ಮೊದಲು ಕಮಿಷನರ್ ನೇಮಿಸಿ, ವರದಿ ಬಂದ ನಂತರ ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಬಂದರೆ, ಕಮಿಷನರ್ ನೇಮಕ ಮತ್ತವರ ವರದಿ ಎರಡಕ್ಕೂ ಮಾನ್ಯತೆ ಇರುವುದಿಲ್ಲ. ಆದ್ದರಿಂದ, ಮೊದಲು ಮೂಲ ದಾವೆಯ ಸಿಂಧುತ್ವ ನಿರ್ಧಾರವಾಗಬೇಕು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸಲು ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು.

ಈ ಮಧ್ಯೆ, ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅಡಿಯಲ್ಲಿ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.

ಮೂಲ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್‌ ಜೂನ್‌ 13ರಂದು ಮಧ್ಯಂತರ ಆದೇಶ ಮಾಡಿತ್ತು.

(ಕೃಪೆ: ಬಾರ್ & ಬೆಂಚ್)



Join Whatsapp