ಐಎಂಎ ವಂಚನೆ ಪ್ರಕರಣ: ED ದೂರು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Prasthutha|

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ-ಇಡಿ ಸಹಾಯಕ ನಿರ್ದೇಶಕ ಬಸವರಾಜ್ ಆರ್. ಮಗ್ದುಮ್ ಅವರು ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

- Advertisement -

ಆರೋಪಿ ಅಬ್ಬಾಸ್ ಮುಹಮ್ಮದ್ ಖಾನ್ ತನ್ನ ವಿರುದ್ಧ ಇಡಿ ಸಹಾಯಕ ನಿರ್ದೇಶಕ ಮಗ್ದುಮ್ ರಿಗೆ ಪ್ರಕರಣ ದಾಖಲಿಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಮಗ್ದುಮ್ ಅವರು ಪಿಎಂಎಲ್ ಕಾಯ್ದೆಯ ಸೆಕ್ಷನ್ 49ರ ಅಡಿ ಅಧಿಕೃತ ಅಧಿಕಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಕ್ರಮ ಸರಿಯಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ವಿಶೇಷ ನ್ಯಾಯಾಲಯದ ಮುಂದೆ ದೂರು ಸಲ್ಲಿಸಲು ಅಧಿಕಾರಿಗೆ ಅಗತ್ಯ ಅಧಿಕಾರ ನೀಡಿದೆ. ಮಗ್ದುಮ್ ಅವರು ಸಹಾಯಕ ನಿರ್ದೇಶಕರ ಶ್ರೇಣಿಗಿಂತ ಕೆಳಗಿರುವ ಅಧಿಕಾರಿಯಲ್ಲ. ಆದ್ದರಿಂದ, ಅವರು ಸಲ್ಲಿಸಿರುವ ದೂರು ರದ್ದುಪಡಿಸುವ ಅಥವಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

- Advertisement -

ಪ್ರಕರಣದ 9ನೇ ಆರೋಪಿಯಾಗಿರುವ ಅಬ್ಬಾಸ್ ಮುಹಮ್ಮದ್ ಖಾನ್ 2019 ರಲ್ಲಿ ಮಗ್ದುಮ್ ಅವರ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ –ಪಿಎಂಎಲ್  ಕಾಯ್ದೆ ಅಡಿ ವಿಶೇಷ ನ್ಯಾಯಾಲಯ ವಿಚಾರಣೆ ಆರಂಭಿಸಿದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅಧಿಕಾರಿ ಬಸವರಾಜ್ ಆರ್. ಮಗ್ದಮ್ ಅವರು ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಪಿಎಂಎಲ್ ಕಾಯ್ದೆಯ ಅಡಿ ಪ್ರಕರಣ ದಾಖಲಿಸುವ ಅಧಿಕಾರ ಹೊಂದಿಲ್ಲ ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ಮಗ್ದುಮ್ ಅವರು ಜಾರಿ ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆ ಮೇಲಿದ್ದಾರೆ. ಆದ್ದರಿಂದ ಅವರು ಪ್ರಕರಣ ದಾಖಲಿಸುವ ಸೂಕ್ತ ಅಧಿಕಾರ ಹೊಂದಿದ್ದಾರೆ ಎಂದು ವಾದಿಸಿದ್ದರು.



Join Whatsapp