ರಸ್ತೆ ಗುಂಡಿಗಳಿಂದಾಗುವ ಅಪಘಾತಗಳ ಬಗ್ಗೆ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

Prasthutha|

ಬೆಂಗಳೂರು: ಗುಂಡಿಗಳು ಮತ್ತು ರಸ್ತೆಗಳ ದುಸ್ಥಿತಿಯಿಂದಾಗಿ ಸಂಭವಿಸುವ ಅಪಘಾತಗಳಲ್ಲಿ ಸಾವು-ನೋವು ಉಂಟಾದ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಲು ಮುಂದಾದರೆ ಯಾವುದೇ ಕಾರಣ ನೀಡದೆ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.

- Advertisement -

ಈ ಸಂಬಂಧ 2015ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ  ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದ್ದು, ರಾಜ್ಯ ಗೃಹ ಇಲಾಖೆಯನ್ನೂ ಪ್ರತಿವಾದಿಯಾಗಿ ಸೇರ್ಪಡೆ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತು.

ಗುಂಡಿ ಇರುವ ರಸ್ತೆಗಳು ಮತ್ತು ರಸ್ತೆಗಳ ಕಳಪೆ ನಿರ್ವಹಣೆಯಿಂದ ಸಾರ್ವಜನಿಕರಿಗೆ ಗಂಭೀರ ಗಾಯ ಅಥವಾ ಸಾವು ಸಂಭವಿಸಿದ ಕುರಿತು ಸಾರ್ವಜನಿಕರು ದೂರು ನೀಡಲು ಮುಂದಾದರೂ ಬಹುತೇಕ ಸಂದರ್ಭಗಳಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂಜರಿಯುತ್ತಿದ್ದಾರೆ. ದೂರು ಸಲ್ಲಿಸಲು ಬರುವವರನ್ನು ಪೊಲೀಸ್ ಅಧಿಕಾರಿಗಳು ವಾಪಸು ಕಳುಹಿಸಬಾರದು ಎಂದು ನ್ಯಾಯಪೀಠ ನಿರ್ದೇಶಿಸಿದೆ.

- Advertisement -

ಫೆಬ್ರವರಿ 6, 2020 ರಂದು ಈ ಕುರಿತು ನೀಡಿದ ಆದೇಶವನ್ನು ಉಲ್ಲೇಖಿಸಿದ ಹೈಕೋರ್ಟ್,  ರಸ್ತೆಗಳ ಕಳಪೆ ಸ್ಥಿತಿಯಿಂದ ಉಂಟಾದ ಜೀವಹಾನಿ ಅಥವಾ ಗಾಯಗಳಾದರೆ ನಾಗರಿಕರು ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ಪರಿಹಾರ ಕೋರಿ ಅರ್ಜಿಗಳು ಬಂದಿವೆಯೇ, ಎಷ್ಟು ಬಂದಿವೆ ಹಾಗೂ ಅಂತವರಿಗೆ ಪರಿಹಾರ ನೀಡಲಾಗಿದೆಯೇ ಎಂದು ಅಂಕಿಅಂಶಗಳನ್ನು ನೀಡುವಂತೆ ಇದೇ ಸಂದರ್ಭದಲ್ಲಿ ಬಿಬಿಎಂಪಿಗೆ ಸೂಚಿಸಿತು.



Join Whatsapp