ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು ಸೋಮವಾರ ನಡೆಸಿ ವಾದ ವಿವಾದ ಆಲಿಸಿ, ನಾಳೆಗೆ ಮುಂದೂಡಿದೆ.
ವಕೀಲ ದೇವದತ್ ಕಾಮತ್ ವಾದ ಮಂಡಿಸಿ, ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದನ್ನು ಖಾತರಿಪಡಿಸುವ ಕರ್ತವ್ಯವನ್ನು ಸರ್ಕಾರ ನಿಭಾಯಿಸಬೇಕು. ಒಂದು ವರ್ಗವು ಮತ್ತೊಂದು ವರ್ಗದ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಬಿಡದಿರುವುದು ಮೂಲಭೂತ ಹಕ್ಕಿನ ನಿರ್ಬಂಧಕ್ಕೆ ಆಧಾರವಾಗಲಾರದು.
ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಯ ಹೊರತಾಗಿ, ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿರ್ಬಂಧಿಸುವ ಕಾನೂನನ್ನು ರಾಜ್ಯ ಸರ್ಕಾರ ಮಾಡಬಹುದು ಎಂದರು.
ಸರ್ಕಾರದ ಆದೇಶದಲ್ಲಿ ಹಿಜಾಬ್ ಬಗ್ಗೆ ಉಲ್ಲೇಖಿಸಲಾಗಿಲ್ಲ. ಇಲ್ಲಿ ಸಮವಸ್ತ್ರದ ಬಗ್ಗೆ ಮಾತ್ರ ಮಾತನಾಡಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಸಿಜೆ ಅವಸ್ಥಿ ಹೇಳಿದರು.