‘‘ಗೆದ್ದ ದ್ವೇಷ.. ಸೋತ ಕಲಾವಿದ,. ವಿದಾಯ!” : ಮುನಾವರ್‌ ಫಾರೂಖಿ

Prasthutha|

ಬೆಂಗಳೂರಿನ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ನಿರಾಕರಣೆ

- Advertisement -

ಬೆಂಗಳೂರು: ಖ್ಯಾತ ಸ್ಟಾಂಡ್‌’ಅಪ್‌ ಕಾಮೆಡಿಯನ್‌ ಮುನಾವರ್‌ ಫಾರೂಖಿ ಅವರ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ, ಮುನಾವರ್‌ ‘‘ದ್ವೇಷ ಗೆದ್ದಿದೆ, ಕಲಾವಿದ ಸೋತುಬಿಟ್ಟ, ನಾನು ಮುಗಿಸುತ್ತಿದ್ದೇನೆ! ವಿದಾಯ! ಅನ್ಯಾಯ” ಎಂದು ಪ್ರತಿಕ್ರಿಯಿಸಿದ್ದಾರೆ.

‘ಬಲಪಂಥೀಯ ಸಂಘಟನೆಗಳ ಬೆದರಿಕೆಯಿಂದಾಗಿ ಕಳೆದ 2 ತಿಂಗಳಿನಲ್ಲಿ ನಮ್ಮ 12 ಕಾರ್ಯಕ್ರಮಗಳು ರದ್ದಾಗಿವೆ. ಇದು ಮುಗಿಸುವ ಸಮಯವಾಗಿದೆ. ನನ್ನ ಸಮಯ ಕಳೆಯಿತು, ಶುಭ ವಿದಾಯ” ಎಂದು ಮುನಾವರ್‌ ಫಾರೂಖಿ ಟ್ವೀಟ್ ಮಾಡಿದ್ದಾರೆ.

- Advertisement -

ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ಭಾನುವಾರ ಮುನಾವರ್‌ ಫಾರೂಖಿ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಆಯೋಜಕರಿಗೆ ಪತ್ರ ಬರೆದಿರುವ ಅಶೋಕನಗರ ಠಾಣೆಯ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. “ಮುನಾವರ್‌ ಫಾರೂಖಿ ಒಬ್ಬರು ವಿವಾದಾತ್ಮಕ ವ್ಯಕ್ತಿಯಾಗಿದ್ದು, ಅವರು ಇತರ ಧರ್ಮಗಳ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡುವಂತಹ ವ್ಯಕ್ತಿ ಎಂದು ನಮಗೆ ತಿಳಿದು ಬಂದಿದೆ. ಆದ್ದರಿಂದ ಹಲವು ರಾಜ್ಯಗಳಲ್ಲಿ ಅವರ ಕಾರ್ಯಕ್ರಮಗಳು ರದ್ದಾಗಿವೆ. ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರ ವಿರುದ್ದ ಪ್ರಕರಣಗಳು ದಾಖಲಾಗಿದೆ. ಕಾರ್ಯಕ್ರಮಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ನಮಗೆ ಮಾಹಿತಿಯಿದೆ. ಅವರ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಶಾಂತಿ ಮತ್ತು ಸೌಹಾರ್ಧತೆ ಹಾಳಾಗುತ್ತದೆ, ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಆದ್ದರಿಂದ ಭಾನುವಾರ ನಡೆಯಲಿರುವ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು” ಎಂದು ಪೊಲೀಸರು ಪತ್ರದಲ್ಲಿ ತಿಳಿಸಿದ್ದಾರೆ.

ಪೊಲೀಸರ ಪತ್ರ ದೊರೆತ ಬಳಿಕ, ಆಯೋಜಕರು ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಮೇಡಿಯನ್ ಮುನಾವರ್‌, ಬಲಪಂಥೀಯ ಸಂಘಟನೆಗಳು ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ದಾಂಧಲೆ ಮಾಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದು ಗೊಳಿಸಲಾಗಿದೆ. ‘ನಫ್ರತ್ ಜೀತಾ ಹೇ-ಆರ್ಟಿಸ್ಟ್ ಹಾರ್ ಗಯ’ (‘ಗೆದ್ದ ದ್ವೇಷ.. ಕಲಾವಿದ ಸೋತಿದ್ದಾನೆ ) ಎಂದು ಟ್ವೀಟ್ ಮಾಡಿದ್ದಾರೆ.

Join Whatsapp