ದ್ವೇಷ ಭಾಷಣ ಒಪ್ಪಲಾಗುವುದಿಲ್ಲ, ಅದನ್ನು ನಿಲ್ಲಿಸಬೇಕಿದೆ: ಸುಪ್ರೀಂಕೋರ್ಟ್

Prasthutha|

ಹೊಸದಿಲ್ಲಿ: ದೇಶಾದ್ಯಂತ ದ್ವೇಷ ಭಾಷಣ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ.

- Advertisement -

ಪತ್ರಕರ್ತ ಶಹೀನ್ ಅಬ್ದುಲ್ಲಾ ಅವರು ಸಲ್ಲಿಸಿದ ಅರ್ಜಿಯೊಂದರಲ್ಲಿ, ದೇಶಾದ್ಯಂತ ನಡೆದ ರ್ಯಾಲಿಗಳಲ್ಲಿ ಒಂದು ಸಮುದಾಯದ ಸದಸ್ಯರನ್ನು ಕೊಲ್ಲಲು ಮತ್ತು ಅವರ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡುವ ಕಠಿಣ ದ್ವೇಷದ ಭಾಷಣಗಳನ್ನು ಹತ್ತಿಕ್ಕಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕಳೆದ ವಾರ ಹರ್ಯಾಣದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಆರು ಮಂದಿ ಸಾವಿಗೀಡಾಗಿದ್ದರು.

ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದತೆ ಇರಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ಹೇಳಿದೆ. ಸಮುದಾಯಗಳ ನಡುವೆ ಸೌಹಾರ್ದತೆ ಇರಬೇಕು. ಎಲ್ಲ ಸಮುದಾಯಗಳು ಜವಾಬ್ದಾರರು. ದ್ವೇಷ ಭಾಷಣ ಒಳ್ಳೆಯದಲ್ಲ. ಅದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

- Advertisement -

ಆಗಸ್ಟ್ 18ರೊಳಗೆ ಸಮಿತಿಯ ಕುರಿತು ಸೂಚನೆಗಳನ್ನು ಪಡೆದು ಉತ್ತರ ನೀಡುವಂತೆ ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ನ್ಯಾಯಾಲಯ ಹೇಳಿದೆ. ವಿಡಿಯೊ ಸೇರಿದಂತೆ ಎಲ್ಲ ವಿಷಯಗಳನ್ನು ಕ್ರೋಡೀಕರಿಸಿ ನೋಡಲ್ ಅಧಿಕಾರಿಗಳಿಗೆ ನೀಡುವಂತೆ ಅರ್ಜಿದಾರರಿಗೆ ಪೀಠ ಹೇಳಿದೆ.

ಅರ್ಜಿಯಲ್ಲಿ ಅಬ್ದುಲ್ಲಾ ಅವರು, ರಾಜ್ಯ ಸರ್ಕಾರಗಳು ಮತ್ತು ಪೊಲೀಸರು ಯಾವುದೇ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಭಾಷಣಗಳನ್ನು ಮಾಡದಂತೆ ಮತ್ತು ಯಾವುದೇ ದೈಹಿಕ ಹಿಂಸೆ ಅಥವಾ ಆಸ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ ಎಂದು ಹೇಳಿದ್ದಾರೆ.

ವಿವಿಧ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಿಗೆ ಬಂದಿರುವ ದ್ವೇಷದ ಮಾತುಗಳ ದೂರುಗಳನ್ನು ಪರಿಶೀಲಿಸುವ ಸಮಿತಿಯನ್ನು ರಚಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂಕೋರ್ಟ್ ಹೇಳಲಿದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

Join Whatsapp