ಲಕ್ನೋ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಆಝಂ ಖಾನ್ ಅವರಿಗೆ ರಾಂಪುರ ನ್ಯಾಯಾಲಯ ದೋಷಿಯೆಂದು ಘೋಷಿಸಿದ್ದು, ಆಝಂ ಖಾನ್ ಮತ್ತು ಇತರ ಇಬ್ಬರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2019ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಐಎಎಸ್ ಅಧಿಕಾರಿ ಆಂಜನೇಯ ಕುಮಾರ್ ಸಿಂಗ್ ವಿರುದ್ಧ ದ್ವೇಷಪೂರಿತ ಭಾಷಣವನ್ನು ಮಾಡಿದ ಪ್ರಕರಣ ದಾಖಲಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ಈ ವರ್ಷದ ಆರಂಭದಲ್ಲಿ ಆಝಂ ಖಾನ್ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ ಅವರು ಭ್ರಷ್ಟಾಚಾರ, ವಂಚನೆ ಸೇರಿದಂತೆ ಸುಮಾರು 90 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.