ಹಾಸನ: ಪತಿ ಹಾಗೂ ಪುಟ್ಟ ಮಗುವನ್ನು ಬಿಟ್ಟು ಪತ್ನಿ ಪರಾರಿಯಾಗಿದ್ದು, ಆಕೆಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿರುವ ಪತಿ ಮಹಾಶಯ ಇದೀಗ ಹಾಸನಕ್ಕೆ ಬಂದು ತಲುಪಿದ್ದಾನೆ.
ಕೋಲಾರ ಮೂಲದ ಮಂಜುನಾಥ್ ಮತ್ತು ಬೆಂಗಳೂರು ಮೂಲದ ರುದ್ರಾಂಬಿಕೆ ಎಂಬವರು ಎಂಟು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮುದ್ದಾದ ಮಗುವಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಪುಟ್ಟ ಮಗುವನ್ನು ಬಿಟ್ಟು ಹೋಗಿರುವ ಆಕೆ ಎಲ್ಲಿದ್ದಾಳೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪತಿ ಮಂಜುನಾಥ ಚಿಂತಾಕ್ರಾಂತನಾಗಿದ್ದಾನೆ. ಆಕೆಗಾಗಿ ಪುಟ್ಟ ಮಗುವಿನ ಜೊತೆ ಊರೂರು ಅಲೆದಾಡುತ್ತಿದ್ದಾನೆ.
ಕೋಲಾರ ಜಿಲ್ಲೆ ಅವಲಹಳ್ಳಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿರುವ ಪತ್ನಿ ರುದ್ರಾಂಬಿಕೆ, ಇದೀಗ ಕರ್ತವ್ಯಕ್ಕೂ ಹೋಗುತ್ತಿಲ್ಲ. ಎಲ್ಲಿದ್ದಾಳೆ ಎಂಬ ಮಾಹಿತಿಯೂ ಇಲ್ಲ ಎಂದು ಮಂಜುನಾಥ್ ಹೇಳಿದ್ದಾನೆ.
ಹಾಸನದ ಉದಯಗಿರಿ ಬಡಾವಣೆಯ ಮನೆಯೊಂದರಲ್ಲಿ ರುದ್ರಾಂಬಿಕೆ ಇದ್ದಾಳೆ ಎಂಬ ಮಾಹಿತಿ ಆಧರಿಸಿ ಕುಟುಂಬ ಸದಸ್ಯರ ಜೊತೆ ಬಂದ ಮಂಜುನಾಥ್, ಈ ಮನೆಯಲ್ಲೇ ಪತ್ನಿ ಇದ್ದಾಳೆ ಎಂದು ಹೊರಗಿನಿಂದ ಮನೆ ಬಾಗಿಲು ಬಂದ್ ಮಾಡಿ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಆ ಮನೆಯಲ್ಲಿ ವಾಸವಾಗಿರುವುದು ಬೇರೊಂದು ಕುಟುಂಬ ಎಂದು ಗೊತ್ತಾಗಿದೆ. ಇದೇ ಮನೆಯಲ್ಲಿ ಪತ್ನಿ ಇದ್ದಾಳೆ ಎಂದು ಬೇರೆಯವರ ಮನೆಯವರ ಬಾಗಿಲು ಬಂದ್ ಮಾಡಿ ಹೈಡ್ರಾಮ ಮಾಡಿದ ಮಂಜುನಾಥ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು, ಮಂಜುನಾಥ್‌ನನ್ನು ವಶಕ್ಕೆ ಪಡೆದು ಬಡಾವಣೆ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಈ ವೇಳೆಯಲ್ಲೂ ತಾನು ಬಾಗಿಲು ಹಾಕಿದ್ದ ಮನೆಯಲ್ಲೇ ಪತ್ನಿ ಇದ್ದಳು ಎಂದು ಮಂಜುನಾಥ್ ಆರೋಪಿಸಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ಸಲಹೆ ನೀಡಿ ಪೊಲೀಸರು ಕಳಿಸಿದ್ದಾರೆ.
ರುದ್ರಾಂಬಿಕೆ ಯಾವ ಕಾರಣಕ್ಕೆ ಗಂಡ, ಮಗುವನ್ನು ತೊರೆದು ಹೋಗಿದ್ದಾಳೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ತನ್ನನ್ನು ಜಾಮೀನು ಮಾಡಿ 15 ಲಕ್ಷ ರೂ.ಸಾಲ ಮಾಡಿ ಎಸ್ಕೇಪ್ ಆಗಿದ್ದಾಳೆ ಎಂಬುದು ಪತಿಯ ಆರೋಪವಾಗಿದೆ. ಆದರೆ ಪತಿ ವಿರುದ್ಧ ದೌರ್ಜನ್ಯ ಆರೋಪದಡಿ ಹಲವು ಕೇಸ್‌ಗಳನ್ನು ರುದ್ರಾಂಬಿಕ ದಾಖಲಿಸಿದ್ದಾಳೆ. ಅಲ್ಲಿಗೆ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಖಾತ್ರಿಯಾಗಿದೆ.
ಈ ಮಧ್ಯೆ ಪತ್ನಿ ತನ್ನಿಂದ ದೂರವಾಗಿರುವುದರಿಂದ ವಿಚ್ಛೇದನಕ್ಕಾಗಿ ವಕೀಲರ ಮೂಲಕ ಪತಿ ನೋಟಿಸ್ ಕಳುಹಿಸಿರುವ ಪತಿ ಮಂಜುನಾಥ್, ಆಕೆ ಯಾರ ಕೈಗೂ ಸಿಗದೆ ಬೇರೊಬ್ಬರ ಜೊತೆ ಸಂಸಾರ ನಡೆಸುತ್ತಿದ್ದಾಳೆ ಎಂದು ದೂರಿದ್ದಾನೆ. ರುದ್ರಾಂಬಿಕೆ ಸಿಕ್ಕ ನಂತರವೇ ಸಾಂಸಾರಿಕ ಜಗಳದ ಸತ್ಯಾಸತ್ಯತೆ ತಿಳಿಯಬೇಕಿದೆ.