ಹಾಸನ: ಎಲೆಕ್ಟ್ರಿಕ್ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಬಿ.ಟಿ ಕೊಪ್ಪಲ್ ಬಳಿ ನಡೆದಿದೆ.
ಮಗನನ್ನು ಶಾಲೆಗೆ ಬಿಡಲು ತಾಯಿ ಮತ್ತು ಮಗ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಮೃತರನ್ನು ಸೀಮಾ (38), ಮಯೂರ (12) ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಕೊಡಗು ಜಿಲ್ಲೆಯ ಶನಿವಾರಸಂತೆಯವರಾಗಿದ್ದು, ಮಗನ ವ್ಯಾಸಂಗಕ್ಕಾಗಿ ತಿಂಗಳ ಹಿಂದಷ್ಟೇ ಹಾಸನಕ್ಕೆ ಬಂದಿದ್ದರು. ಸೀಮಾ ಅವರ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವಾರದ ಹಿಂದೆಯಷ್ಟೇ ಪತ್ನಿ-ಮಗನನ್ನು ನೋಡಿಕೊಂಡು ಹೋಗಿದ್ದರು.
ಚಾಲಕನ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಲಾರಿಯನ್ನುವಶಕ್ಕೆ ಪಡೆದುಕೊಂಡಿದ್ದಾರೆ.