ಹಾಸನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಹಂಪನಗುಪ್ಪೆಯ ರೈತ ಹರೀಶ್ ಅವರ ದ್ವಿತಿಯ ಪುತ್ರ ಎಚ್.ಯೋಗೇಶ್ (28) ಆತ್ಮಹತ್ಯೆಗೆ ಶರಣಾದ ಯೋಧರಾಗಿದ್ದು, ಅವರ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಕಳೆದ ಜ.4 ರಂದು ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಅವರು ತಮ್ಮ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಅನ್ಯೋನ್ಯವಾಗಿದ್ದರು.
ಮನೆಯಲ್ಲಿ ಮಲಗಿದ್ದ ಯೋಗೇಶ್ ನಿನ್ನೆ ಬೆಳಗ್ಗೆ 10 ಗಂಟೆ ಸಮಯವಾದರೂ ರೂಂ ಬಾಗಿಲು ತೆರೆದಿರಲಿಲ್ಲ. ಮನೆಯವರು ಎಷ್ಟು ಕೂಗಿದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲನ್ನು ಒಡೆದು ನೋಡಿದಾಗ ಯೋಗೇಶ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಪರೀಕ್ಷಿಸಿ ಯೋಧ ಯೋಗೀಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಯೋಧನ ಪಾರ್ಥೀವ ಶರೀರವನ್ನು ನಿನ್ನೆ ರಾತ್ರಿ ಹಂಪನಗುಪ್ಪೆ ಗ್ರಾಮಕ್ಕೆ ತಂದಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಗಳ ಸಮ್ಮುಖದಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಯೋಗೇಶ್ ಅವರು 2011 ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ಜಾಥಾದಲ್ಲಿ ಭಾಗವಹಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ.
ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.