ಹಾಸನ: ಬೆಲೆ ಏರಿಕೆ ಖಂಡಿಸಿ ಎಸ್‌ ಡಿಪಿಐ ಪ್ರತಿಭಟನೆ

Prasthutha|

ಹಾಸನ: ಬಡವರಿಗೆ ಹೊರೆಯಾಗುವ ದಿನನಿತ್ಯ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  ವತಿಯಿಂದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

- Advertisement -

ಪ್ರತಿಭಟನೆ  ವೇಳೆ ಮಾತನಾಡಿದ ನಾಯಕರು, ಕೇಂದ್ರದ ತೆರಿಗೆ ನೀತಿ ಬಡವರು ತಿನ್ನುವ ಅನ್ನಕ್ಕೂ ಕಲ್ಲು ಹಾಕಿದೆ. ಮೊಸರು, ಮಜ್ಜಿಗೆ, ಲಸ್ಸಿ ಮೊದಲಾದ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಮೇಲೆ ಗಧಾಪ್ರಹಾರ ಮಾಡುತ್ತಿದೆ. ಕಳೆದ ಬಾರಿ ಜಿಎಸ್‌ಟಿ ಜಾರಿಗೆ ತರುವ ವೇಳೆ ಪ್ರಧಾನಿ ಮೋದಿ ಅವರು, ಹಿಂದಿನ ಸರಕಾರಗಳು ಅಕ್ಕಿ, ಹಾಲಿಗೂ ತೆರಿಗೆ ಪಡೆಯುತ್ತಿದ್ದವು. ನಾವು ಹಾಗೆ ಮಾಡುವುದಿಲ್ಲ ಎಂದಿದ್ದರು. ಇದೀಗ ಅವರ ಸರ್ಕಾರ ಮಾತಿಗೆ ತಪ್ಪಿದೆ ಎಂದು ಕಿಡಿ ಕಾರಿದರು.

 ಈಗಾಗಲೇ ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಮಧ್ಯಮ ಹಾಗೂ ಬಡವರ ಬದುಕು ಜಿಎಸ್‌ಟಿ ಹೆಚ್ಚಳದಿಂದ ಮತ್ತಷ್ಟು ದುರ್ಬರವಾಗಲಿದೆ. ಕ್ರೂರ ಸರ್ಕಾರದಿಂದ ಮಾತ್ರ ಇಂತಹ ತೀರ್ಮಾನ ಕೈಗೊಳ್ಳಲು ಸಾಧ್ಯ. ಕಾರ್ಪೊರೇಟ್ ಕಂಪನಿಗಳು ಮತ್ತು ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿ, ಬಡವರ ಹಿತ ಬಲಿಕೊಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

- Advertisement -

ಅಚ್ಛೇ ದಿನ್ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಜನರ ರಕ್ತ ಹೀರಿ ಅವರ ಬದುಕನ್ನು ಕಸಿಯುತ್ತಿದೆ. ಹೀಗೇ ಮುಂದುವರಿದರೆ ಭಾರತ ಮತ್ತೊಂದು ಶ್ರೀಲಂಕಾ ಆಗುವುದರಲ್ಲಿ ಸಂಶಯವಿಲ್ಲ. ಅದು ಆಗದಂತೆ ಕೂಡಲೇ ದಿನಬಳಕೆ ಆಹಾರ ವಸ್ತುಗಳ ಮೇಲೆ ಹಾಕಿರುವ ತೆರಿಗೆ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾ ಕದಂಬ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಜಿಲ್ಲಾಧ್ಯಕ್ಷ ಸಿದ್ಧಿಕ್ ಆನೆಮಹಲ್, ಸಯ್ಯದ್ ಫೈರೋಜ್, ಅಸೆಂಬ್ಲಿ ಅಧ್ಯಕ್ಷ ಸರ್ದಾರ್ ನದೀಮ್, ಅಮೀರ್ ಜಾನ್, ಖಾಸಿಮ್, ವಸೀಮ್, ಸರ್ದಾರ್ ಪಾಷಾ, ನೂರುಲ್ಲಾ ಇದ್ದರು.

Join Whatsapp