ಹಾಸನ| ಹಸುಗಳನ್ನೇ ಬಂಧಿಸಿದ ಪೊಲೀಸರು !

Prasthutha|

ಬೇಲೂರು:  ಬೇಲೂರು ಪೊಲೀಸರು ಹಸುಗಳನ್ನು ಅರೆಸ್ಟ್ ಮಾಡಿದ್ದಾರೆ!

- Advertisement -

ಕೇಳೋಕೆ ವಿಚಿತ್ರ ಅನಿಸಿದರೂ ಇದು ಸತ್ಯ. ಠಾಣೆ ಅವರಣದಲ್ಲಿ ನೆಟ್ಟಿದ್ದ ಗಿಡಗಳನ್ನು ಹಸುಗಳು ತಿಂದಿದ್ದಕ್ಕೆ ಠಾಣೆ ಕಾಂಪೌಂಡ್ ಒಳಗೆ ಹಸುಗಳನ್ನು ಕಟ್ಟಿಹಾಕಿ ವೃದ್ಧೆಯರಿಬ್ಬರನ್ನು ಪೊಲೀಸರು ಸತಾಯಿಸಿದ ಘಟನೆ ಬೇಲೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇನ್ನು ತಮ್ಮ ಹಸುಗಳನ್ನು ಬಿಟ್ಟು ಕಳಿಸುವಂತೆ ಜಾನುವಾರು ಮಾಲೀಕರಾದ ಸಿದ್ದಮ್ಮ, ನಿಂಗಮ್ಮ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಬೇಲೂರು ಪೊಲೀಸ್ ಠಾಣೆ ಆವರಣದೊಳಗೆ ಬೇಲೂರು ನೆಹರು ನಿವಾಸಿಗಳಾದ ಸಿದ್ದಮ್ಮ, ಮತ್ತು ನಿಂಗಮ್ಮ ಅವರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ತಿಂದಿವೆ. ಇದರಿಂದ ಬೇಸತ್ತ ಠಾಣಾ ಸಿಬ್ಬಂದಿ ಸಿಪಿಐ ಯೋಗೀಶ್ ಆದೇಶದಂತೆ ಹಸುಗಳನ್ನು ಠಾಣೆ ಬಳಿಯಲ್ಲಿ ಕಟ್ಟಿ ಹಾಕಿದ್ದಾರೆ. ಸಂಜೆವರೆಗೆ ವೃದ್ಧೆಯರಿಬ್ಬರು ಬೇಡಿಕೊಂಡರೂ ಹಸುಗಳನ್ನು ಬಿಡಲಿಲ್ಲ ಮತ್ತು ಹಸುಗಳಿಂದ ಹಾಲು ಕರೆಯಲು ಅವಕಾಶವೇ ನೀಡಲಿಲ್ಲ ಎಂದು ಮಾಲೀಕರ ಆರೋಪಿಸಿದ್ದಾರೆ.

- Advertisement -

ಹಾಲು ಕರೆಯದೆ ಹೋದರೆ ಹಸುಗಳ ಕೆಚ್ಚಲು ಬಾತು ಹೋಗಬಹುದು. ನಮಗೆ  ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ . ಈ ಹಸುಗಳೇ ಜೀವನಾಧಾರ ಎಂದು ಹೇಳಿದರೂ ಪೊಲೀಸ್ ಸಿಬ್ಬಂದಿ ಹಸು ಬಿಟ್ಟಿಲ್ಲ. ನಂತರ ಸಾರ್ವಜನಿಕರು ಹಸುಗಳನ್ನು ಬಿಡುವಂತೆ ಒತ್ತಾಯಿಸಿದಾಗ ರಾತ್ರಿ 10.30 ಕ್ಕೆ  ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಬೇಲೂರು ಪೊಲೀಸ್ ಹೀಗೆ ಮಾಡಬಾರದಿತ್ತು ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಕಳ್ಳರನ್ನು ಹಿಡಿಯಲು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿ ಹಿಂದೆ ಮುಂದೆ ನೋಡುವ  ಪೊಲೀಸರು, ಹಸುಗಳನ್ನು ಬಂಧಿಸಿ ತಮ್ಮ ಶೌರ್ಯ ಮೆರೆಯೋದು ಸರಿಯಾ ಎಂದೂ ಖಂಡನೆ ವ್ಯಕ್ತವಾಗಿದೆ.

ಠಾಣೆಯಲ್ಲಿನ  ಗಿಡಗಳನ್ನು ತಿಂದರೆ ಬೈದು ಬುದ್ದಿ ಹೇಳಿ ವೃದ್ಧೆಯರಿಗೆ ಹಸುಗಳನ್ನು ಹಿಂದುರುಗಿಸಿದರೆ ಮಾನವೀಯ ನಿಟ್ಟಿನಲ್ಲಿ ಸಿಪಿಐ ಯೋಗೀಶ್, ಉತ್ತಮ ಎನಿಸಿಕೊಳ್ಳುತ್ತಿದ್ದರು. ಆದರೆ ವಯೋವೃದ್ಧ ಇಬ್ಬರು ಮಹಿಳೆಯರಿಗೆ ಬಾಯಿಗೆ ಬಂದ ಹಾಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ಆರೋಪಗಳನ್ನು ಹೊತ್ತು ಪೇಚಿಗೆ ಸಿಲುಕುತ್ತಿರಲಿಲ್ಲ ಅನ್ನೊ ಮಾತು ಅಷ್ಟೇ ಸತ್ಯ.

Join Whatsapp