ಹಾಸನ: ಹೊಸ ಯೋಜನೆ ತೆರೆದಿಟ್ಟ ನೂತನ ಎಸ್ಪಿ

Prasthutha|

►ಕಾನೂನು ಸುವ್ಯವಸ್ಥೆ-ಅಕ್ರಮ ಚಟುವಟಿಕೆ, ರೌಡಿಸಂಗೆ ಕಡಿವಾಣ ಮೊದಲ ಆದ್ಯತೆ

- Advertisement -

ಹಾಸನ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದು ನೂತನ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರ ಚಟುವಟಿಕೆಗಳಾದ ಅಬಕಾರಿ, ಮಟ್ಕಾ, ಮರಳು ದಂಧೆಗಳಿಗೆ ಕಡಿವಾಣ ಹಾಕುವುದು ಎರಡನೇ ಆದ್ಯತೆ. ಬಳಿಕ ರೌಡಿಸಂಗೆ ನಿಯಂತ್ರಣ ಹೇರುವುದಾಗಿದೆ. ತಪ್ಪು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

- Advertisement -

ನಾನು ಜಿಲ್ಲೆಗೆ ಬಂದು ಮೂರು ದಿನಗಳಾಗಿವೆ. ಶೀಘ್ರವೇ ಜಿಲ್ಲೆಯ ಎಲ್ಲಾ ಸ್ಟೇಷನ್‌ಗಳಿಗೆ ಭೇಟಿ ಕೊಡುವ ಕೆಲಸ ಆರಂಭಿಸುತ್ತೇನೆ. ಮಂಗಳೂರು ಡಿಸಿಪಿಯಾಗಿ ಕೆಲಸ ಮಾಡುವ ವೇಳೆ ಹಾಸನ ಜನತೆಯ ಬಗ್ಗೆ ಕೇಳಿದ್ದೇನೆ. ಜಿಲ್ಲೆಯ ಜನರು ಹೃದಯವಂತರು. ಕಾನೂನು ಪಾಲನೆಗೆ ಗೌರವ ಕೊಡುತ್ತಾರೆ ಎಂದು ತಿಳಿದಿದ್ದೇನೆ. ಮುಂದೆಯೂ ನನಗೆ ಎಲ್ಲಾ ರೀತಿಯ ಸಹಕಾರ ಲಭಿಸಬಹುದೆಂದು ಭಾವಿಸುತ್ತೇನೆ ಎಂದು ಹೇಳಿದರು.

ಯಾವುದೇ ರೀತಿಯಲ್ಲೂ ಕಾನೂನು ಉಲ್ಲಂಘನೆಯಾಗಬಾರದು. ಹಾಗೆಯೇ ಕಾನೂನು ಬಾಹಿರ ಚಟುವಟಿಕೆಗಳು ನಿಲ್ಲಬೇಕು. ಪ್ರಮುಖವಾಗಿ ಗೂಂಡಾಯಿಸಂ  ನಿಯಂತ್ರಣಕ್ಕೆ ಬರಬೇಕು. ಆ ಮೂಲಕ ಜನರು ಹೆದರಿಕೆ ಇಲ್ಲದೆ ಎಲ್ಲಾ ಕಡೆ ಓಡಾಡುವಂತಾಗಬೇಕು ಎಂಬುದು ನನ್ನ ಸದಾಶಯ ಎಂದರು. ಜನ ಸಂಪರ್ಕ ಸಭೆ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡುವುದು ನನ್ನ ಗುರಿ ಎಂದು ಹೇಳಿದರು.

ಜಿಲ್ಲೆಯ ಬಗ್ಗೆ ತಿಳಿಯಲು ಒಂದು ತಿಂಗಳ ಅಧ್ಯಯನ ಬೇಕಿದೆ. ಇಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ದಿಶಾ ಮೀಟಿಂಗ್ ಅಕ್ರಮ ಚಟುವಟಿಕೆಗಳ ಬಗ್ಗೆ ಕೆಲ ವಿಚಾರಗಳು ಚರ್ಚೆಯಾಗಿವೆ. ಇದನ್ನು ನಮ್ಮ ಅಧಿಕಾರಿಗಳಿಗೆ ಮನವರಿಕೆ ಮಾಡಿ ಹಂತ ಹಂತವಾಗಿ ಕಾರ್ಯಾಚರಣೆ ಮಾಡಲಾಗುವುದು ಎಂದರು.

ಬೀಟ್ ವ್ಯವಸ್ಥೆ ಸುಧಾರಣೆ, ಇಲಾಖೆ ಸಿಬ್ಬಂದಿಯ ಆರೋಗ್ಯ, ದೈಹಿಕ ದೃಢತೆ, ಕ್ರೀಡಾಕೂಟ, ಮಕ್ಕಳ ಸ್ನೇಹಿ ವ್ಯವಸ್ಥೆ ಜಾರಿ, ರೌಡಿಗಳ ಮಾನಿಟರಿಂಗ್ ಹೀಗೆ ನಮ್ಮದೇ ಆದ ಕೆಲವು ಯೋಜನೆಗಳಿವೆ. ಇವುಗಳನ್ನು ಅನುಷ್ಠಾನ ಮಾಡಿದ ನಂತರ ಹೆಚ್ಚು ಅವಧಿಗೆ ಮುಂದುವರಿಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.



Join Whatsapp