ಹಾಸನ: ಹಾಸನ ಹಾಲು ಒಕ್ಕೂಟದಲ್ಲಿ ಉತ್ಪಾದನೆಯಾಗುವ ಪೆಟ್ ಬಾಟಲ್ ಹಾಲು ಮಾರುಕಟ್ಟೆ ಭಾರತದ ತುತ್ತತುದಿಯಲ್ಲಿರುವ ಲೇಹ್ ಮತ್ತು ಲಡಾಕ್ವರೆಗೂ ವಿಸ್ತರಣೆಯಾಗಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ತಿಳಿಸಿದರು.
ಹಾಸನ ಡೈರಿ ಯಿಂದ ಭಾರತೀಯ ರೈಲ್ವೆಯ ಕೆಟರಿಂಗ್ ವಿಭಾಗಕ್ಕೆ ಸರಬರಾಜಾಗುವ ಪೆಟ್ ಬಾಟಲ್ಗಳ ಸಾಗಣೆಗೆ ಚಾಲನೆ ನೀಡಿ ಮಾತನಾಡಿದ ರೇವಣ್ಣ, ಹಾಲು ಒಕ್ಕೂಟದಲ್ಲಿ ಸ್ಥಾಪಿಸಿರುವ ನೂತನ ಸ್ವಯಂ ಚಾಲಿತ ಪೆಟ್ಬಾಟಲ್ ಘಟಕದಲ್ಲಿ ಫೆಬ್ರವರಿ-2022ರಿಂದ ಉತ್ಪಾದನೆ ಪ್ರಾರಂಭಿಸಿದ್ದು, ದಿನಕ್ಕೆ 30 ಲಕ್ಷ ಬಾಟಲ್ ಗಳವರೆಗೆ ಉತ್ಪಾದನೆ ಮಾಡುತ್ತಿದ್ದು, ಘಟಕವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಪೆಟ್ ಬಾಟಲ್ ಘಟಕದಲ್ಲಿ ಉತ್ಪಾದಿಸುವ ಹಾಲಿಗೆ ದೇಶಾದ್ಯಂತ ಮಾರುಕಟ್ಟೆ ಜಾಲ ವಿಸ್ತರಿಸಿದ್ದು, ಭಾರತ ಗಡಿಭಾಗದ ತುದಿ ಲೇಹ್ ಮತ್ತು ಲಡಾಖ್ ವರೆಗೂ ಮಾರಾಟ ಜಾಲವನ್ನು ವಿಸ್ತರಿಸಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಪೆಟ್ ಬಾಟಲ್ ಸುವಾಸಿತ ಹಾಲಿನ ಮಾರುಕಟ್ಟೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸುವಾಸಿತ ಹಾಲನ್ನು ಒದಗಿಸುವ ನಿಟ್ಟಿನಲ್ಲಿ ರೈಲ್ವೆಯ ಕೆಟರಿಂಗ್ ವಿಭಾಗದೊಂದಿಗೆ ಹಾಸನ ಡೈರಿ ಯು ಕೆಎಂಎಫ್ ಮುಖಾಂತರ ಒಪ್ಪಂದ ಮಾಡಿಕೊಂಡಿದೆ. ಜು.1ರಿಂದ ಸುಮಾರು 75000 ಲೀ. (3.75 ಲಕ್ಷ ಬಾಟಲ್) ಸರಬರಾಜು ಮಾಡುತ್ತಿದ್ದು, ಮುಂಬೈ, ಚೆನ್ನೈ, ಮಂಗಳೂರು ಮತ್ತು ಬೆಂಗಳೂರು ರೈಲ್ವೇ ಡಿಪೋಗಳಿಗೆ ಸರಬರಾಜು ಮಾಡಲಾಗುವುದು. ಮುಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯ ಬೇಡಿಕೆಗೆ ಅನುಸಾರವಾಗಿ ಎಲ್ಲಾ ರೈಲು ನಿಲ್ದಾಣಗಳಿಗೆ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ರೈಲ್ವೇಯು ಪ್ರಾರಂಭಿಕ ಹಂತದಲ್ಲಿ ಮಾಸಿಕ 3 ಲಕ್ಷ ಲೀ. ಬೇಡಿಕೆ ಸಲ್ಲಿಸಿದ್ದು, ಬೇಸಿಗೆಯಲ್ಲಿ 50 ರಿಂದ 6.0 ಲಕ್ಷ ಲೀ. (30 ಲಕ್ಷ ಬಾಟಲ್) ಗೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ವಿಮಾನ ಪ್ರಯಾಣಿಕರಿಗೆ ಸುವಾಸಿತ ಹಾಲನ್ನು ಒದಗಿಸುವ ನಿಟ್ಟಿನಲ್ಲಿ ಹೆಸರಾಂತ ವಿಮಾನ ಸಂಸ್ಥೆಗಳಾದ ಏರ್ ಏಷಿಯಾ, ವಿಸ್ತಾರ, ಏರ್ ಇಂಡಿಯಾ ಮುಂತಾದ ವಿಮಾನಯಾನ ಸಂಸ್ಥೆಗಳಿಗೆ ಸರಬರಾಜು ಮಾಡಲು ಮಾತುಕತೆ ನಡೆಯುತ್ತಿದೆ.
ಪ್ರಸ್ತುತ ಸ್ಥಾಪನೆ ಮಾಡಿರುವ ಸುವಾಸಿತ ಪೆಟ್ ಬಾಟಲ್ ಹಾಲಿನ ಉತ್ಪಾದನಾ ಸಾಮರ್ಥ್ಯ ದಿನಕ್ಕೆ 5 ಲಕ್ಷ ಬಾಟಲ್ ಗಳಿದ್ದು, ಸಿವಿಲ್ ಮಾರುಕಟ್ಟೆ, ರೈಲ್ವೆ ಇಲಾಖೆ ಹಾಗೂ ವಿಮಾನಯಾನ ಸಂಸ್ಥೆಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದದಂತೆ ಉತ್ಪಾದನಾ ಸಾಮರ್ಥ್ಯವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಹಾಗೂ ಹಾಸನ ಡೈರಿ ಸಿಬ್ಬಂದಿ ಉಪಸ್ಥಿತರಿದ್ದರು.