ಹಾಸನ: ಮನೆ ಮುಂದೆ ಹಾದು ಹೋದ ಜೋಡಿ ಆನೆ

Prasthutha|

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪೆಟ್ಟಿನ ನಡುವೆ ಕಾಡಾನೆ ಉಪಟಳವೂ ಮುಂದುವರಿದಿದೆ. ಸಕಲೇಶಪುರ ತಾಲೂಕು ಕಲ್ಲಹಳ್ಳಿ ಗ್ರಾಮದಲ್ಲಿ ಮರಿಯಾನೆ ಜೊತೆ ತಾಯಿ ಆನೆ ಜೋಡಿ, ಬಸವರಾಜು ಎಂಬುವರ ಮನೆಯ ಮುಂದೆಯೇ ಹಾದು ಹೋಗಿವೆ. ಈ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಕಾಡಾನೆಗಳನ್ನು ಕಂಡೊಡನೆ ನಿವಾಸಿಗಳು ಮನೆಯೊಳಗೆ ಓಡಿ ಹೋಗಿದ್ದಾರೆ. ನಂತರ ಅಲ್ಲಿಂದ ಆನೆಗಳು ಕಾಫಿ ತೋಟ ಸೇರಿಕೊಂಡಿವೆ.

- Advertisement -

ಇದಕ್ಕೂ ಮುನ್ನ ಜೋಡಿ ಆನೆ ಕೆಲ ಹೊತ್ತು ಮನೆ ಮುಂದೆಯೇ ನಿಂತಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಅಕ್ಷರಶಃ ಹೆದರಿದ ಮನೆಯವರು ಒಳ ಸೇರಿಕೊಂಡರು. ನಂತರ ಅಲ್ಲಿಂದ ಕಾಫಿ ತೋಟಕ್ಕೆ ಹೋಗಿವೆ. ಕಾಡಾನೆಗಳ ಓಡಾಟದಿಂದ ಇಪ್ಪತ್ತು ವರ್ಷಕ್ಕೂ ಹಳೆಯದಾದ ಕಾಫಿ ಗಿಡಗಳು ಮುರಿದು ಹೋಗಿವೆ. ಇತರೆಡೆಗಳಲ್ಲಿ ಬಾಳೆ, ಭತ್ತದ ಸಸಿಗಳನ್ನೂ ತಿಂದು ನಾಶ ಮಾಡಿವೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ, ಆಲೂರು ಹಾಗೂ ಬೇಲೂರು ಭಾಗದಲ್ಲಿ ಕಾಡಾನೆಗಳ ದಾಂಧಲೆ ವಿಪರೀತವಾಗಿದ್ದು, ಆಗಾಗ್ಗೆ ಸಾವು-ನೋವು ಕೂಡ ಸಂಭವಿಸುತ್ತಿವೆ. ಆದರೂ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆನೆ ಹಾವಳಿಯಿಂದ ನೊಂದು ಹೋಗಿರುವ ಜನರು ಆಕ್ರೋಶ ಹೊರ ಹಾಕಿದ್ದಾರೆ.

Join Whatsapp