ಜನರಿಗೆ 20 ಗಂಟೆ ಲೋಡ್ ಶೆಡ್ಡಿಂಗ್: ಅದಾನಿಗೆ 2,356 ಲಕ್ಷ ಯೂನಿಟ್ ಪವರ್ ಸಪ್ಲೈ; ಕಾಂಗ್ರೆಸ್ ಆರೋಪ

Prasthutha|

ಚಂಡೀಗಢ: ಬಿಸಿಲಿನ ತಾಪಕ್ಕೆ ಹರ್ಯಾಣ ಜನತೆ ತತ್ತರಿಸಿರುವ ಮಧ್ಯೆ ಸುಮಾರು 20 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಿಸುತ್ತಿರುವಾಗ ಬಿಜೆಪಿ ಸರ್ಕಾರ ಗುಜರಾತಿನ ಅದಾನಿ ಪವರ್ ಲಿಮಿಟೆಡ್ ಕಂಪೆನಿಗೆ 2,356 ಲಕ್ಷ ಯೂನಿಟ್ ವಿದ್ಯುತ್ ಅನ್ನು ರಫ್ತು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಎಪಿಎಲ್‌ನಿಂದ 1,424 ಮೆಗಾವ್ಯಾಟ್ ಗುತ್ತಿಗೆ ಪಡೆದ ವಿದ್ಯುತ್ ಪೂರೈಕೆಯನ್ನು ಜಾರಿಗೊಳಿಸುವ ಬದಲು ರಾಜ್ಯ ಸರ್ಕಾರವು ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಇಂಧನವನ್ನು ಪೂರೈಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಒಂದು ಕಡೆ ಎಪಿಎಲ್ ಹರ್ಯಾಣಕ್ಕೆ 1,424 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡದೆ ವಿದ್ಯುತ್ ಖರೀದಿ ಒಪ್ಪಂದವನ್ನು ಧಿಕ್ಕರಿಸಿದೆ. ಇನ್ನೊಂದು ಕಡೆ ರಾಜ್ಯ ಸರ್ಕಾರವು ಎಪಿಎಲ್‌ಗೆ ದಿನಕ್ಕೆ ಸುಮಾರು 114 ಲಕ್ಷ ಯೂನಿಟ್ ವಿದ್ಯುತ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ರಿವರ್ಸ್ ಫ್ಲೋನಲ್ಲಿ ಪೂರೈಸುತ್ತಿದೆ. ಈ ಮಧ್ಯೆ ಹರ್ಯಾಣದ ಜನತೆ ಬಿಸಿಲಿನ ಬೇಗೆಯಲ್ಲಿ 20 ಗಂಟೆಗಳ ಕಾಲ ಜೀವನ ನಡೆಸುತ್ತಿದ್ದಾರೆ. ಇದು ಇಲ್ಲಿನ ಜನತೆಗೆ ಮಾಡಿದ ಮಹಾ ವಂಚನೆ ಎಂದು ಅವರು ಕಿಡಿಕಾರಿದ್ದಾರೆ.

- Advertisement -

ವಿದ್ಯುತ್ ಕೊರತೆ ನೀಗಿಸಲು ಪ್ರತಿ ಯೂನಿಟ್‌ಗೆ ರೂ. 5.75 ದರದಲ್ಲಿ ವಿದ್ಯುತ್ ಖರೀದಿಸುವ ಮೂಲಕ ರಾಜ್ಯ ಸರ್ಕಾರವು ಸಾರ್ವಜನಿಕ ಬೊಕ್ಕಸವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಮಾಜಿ ವಿದ್ಯುತ್ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 9 ಮತ್ತು 29 ರ ನಡುವೆ 2,356.30 ಲಕ್ಷ ಯೂನಿಟ್ ವಿದ್ಯುತ್ ರಫ್ತು ಮಾಡಲಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ ಎಂದು ಕಾಂಗ್ರೆಸ್ ಮುಖಂಡ ಸುರ್ಜೇವಾಲ ತಿಳಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‌ನ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹರಿಯಾಣದ ವಿದ್ಯುತ್ ಸಚಿವ ರಂಜಿತ್ ಸಿಂಗ್, ಮುಂದ್ರಾ-ಮಹೇಂದರ್‌ಗಢ್ ಹೈ-ವೋಲ್ಟೇಜ್ ಮೀಸಲಾದ ಕರೆಂಟ್ ಟ್ರಾನ್ಸ್‌ಮಿಷನ್ ಲೈನ್‌ನ ಹರಿವಿನೊಂದಿಗೆ ರಾಜ್ಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. “ಹರಿಯಾಣದಲ್ಲಿ ವಿದ್ಯುತ್ ಪಾಲನ್ನು ಎಲ್ಲಿಯೂ ರಫ್ತು ಮಾಡಲಾಗುತ್ತಿಲ್ಲ” ಎಂದು ತಿಳಿಸಿದ್ದಾರೆ.



Join Whatsapp