ನವದೆಹಲಿ: ಪ್ರಭಾಸ್, ಅಮಿತಾಬ್ ಬಚ್ಚನ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಕೋಟ್ಯಂತರ ಜನ ನೋಡಿ ಮೆಚ್ಚಿ ಸೂಪರ್ ಹಿಟ್ ಮಾಡಿದರೆ, ಇದೇ ಸಿನಿಮಾ ವಿರುದ್ಧ ‘ಧಾರ್ಮಿಕ ಭಾವನೆಗೆ ಧಕ್ಕೆ’ ದೂರು ದಾಖಲಿಸಲಾಗಿದೆ. ಈ ಹಿನ್ನೆಯಲ್ಲಿ ಅಮಿತಾಬ್ ಬಚ್ಚನ್, ಪ್ರಭಾಸ್, ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕ ಸುರೇಶ್ ಅವರಿಗೆ ನೊಟೀಸ್ ನೀಡಲಾಗಿದೆ.
ಶ್ರೀ ಕಲ್ಕಿ ಧಾಮದ ಕಲ್ಕಿ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣ ಎಂಬುವರು ‘ಕಲ್ಕಿ 2898 ಎಡಿ’ ಸಿನಿಮಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಿನಿಮಾದ ನಟರಾದ ಪ್ರಭಾಸ್, ಅಮಿತಾಬ್ ಬಚ್ಚನ್ ಇನ್ನೂ ಕೆಲವರಿಗೆ ನೊಟೀಸ್ ನೀಡಲಾಗಿದೆ. ಸಿನಿಮಾವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎನ್ನಲಾಗಿದ್ದು, ಹಿಂದೂ ಸಂಸ್ಕೃತಿಯ ದೇವರುಗಳ ಬಗೆಗೆ ಇರುವ ಕತೆಗಳನ್ನು, ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಕತೆಗಳನ್ನು ತಿರುಚಲಾಗಿದೆ ಹಾಗೂ ದೇವರುಗಳನ್ನು ಸಹಜವಲ್ಲದ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದೆ.
ಚಿತ್ರವು ಭಗವಾನ್ ಕಲ್ಕಿಯ ಬಗ್ಗೆ ಇರುವ ಮೂಲಭೂತ ಪರಿಕಲ್ಪನೆಯನ್ನೇ ಬದಲಾಯಿಸಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಬರೆದಿರುವ ಮತ್ತು ವಿವರಿಸಿದ್ದರ ಸಂಪೂರ್ಣ ವಿರುದ್ಧವಾಗಿ ಚಿತ್ರಿಸಲಾಗಿದೆ. ಭಗವಾನ್ ‘ಕಲ್ಕಿ 2898 ಎಡಿ’ ಸಿನಿಮಾದ ಕಥೆಯ ಚಿತ್ರಣ ಮತ್ತು ವಿವರಣೆ ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಸಿನಿಮಾದಲ್ಲಿ ಹಿಂದೂಗಳ ಪವಿತ್ರ ಗ್ರಂಥಗಳನ್ನು ಅವಮಾನಿಸಲಾಗದೆ. ಇದು ಕೋಟಿಗಟ್ಟಲೆ ಹಿಂದೂಗಳು ಮತ್ತು ಕಲ್ಕಿ ಅನುಯಾಯಿಗಳ ಧಾರ್ಮಿಕ ನಂಬಿಕೆಗಳಿಗೆ ನೀಡಿರುವ ಪೆಟ್ಟಾಗಿದೆ’ ಎಂದಿದ್ದಾರೆ ಶ್ರೀ ಕಲ್ಕಿ ಧಾಮದ ಕಲ್ಕಿ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣ.
ಲೀಗಲ್ ನೋಟಿಸ್ ನೀಡಿರುವ ಆಚಾರ್ಯ ಪ್ರಮೋದ್ ಕೃಷ್ಣಂ, ಚಲನಚಿತ್ರ ನಿರ್ಮಾಪಕರು 15 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಅಥವಾ ಸಿನಿಮಾದಲ್ಲಿರುವ ಸಮಸ್ಯೆಗಳನ್ನು 15 ದಿನಗಳಲ್ಲಿ ಬಗೆಹರಿಸಬೇಕು ಎಂದು ಹೇಳಿದ್ದಾರೆ. ಒಂದೊಮ್ಮೆ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೊಟೀಸ್ ಅನ್ನು ನಟ ಅಮಿತಾಬ್ ಬಚ್ಚನ್, ಪ್ರಭಾಸ್, ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕ ಸುರೇಶ್ ಅವರಿಗೂ ನೊಟೀಸ್ ನೀಡಲಾಗಿದೆ.