ಬೆಳ್ತಂಗಡಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಶಾಸಕರಾಗಿ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಸಹೋದರ, ಕಾಂಗ್ರೆಸ್ ನಾಯಕ ಯೋಗೀಶ್ ಕುಮಾರ್ ಪತ್ರಿಕೆಯಲ್ಲಿ ಅಭಿನಂದನೆ ಸಲ್ಲಿಸಿದ್ದರು. ಆದರೆ ಈ ನಡೆಯ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಸಂತ ಬಂಗೇರ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.
ವಸಂತ ಬಂಗೇರ ತನ್ನ ಆಪ್ತರೊಂದಿಗೆ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ನಾನು ಹೈಕಮಾಂಡ್ ಮುಂದೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ನಾನು ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹರೀಶ್ ಕುಮಾರ್ ಅವರ ಸೋದರ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಹಿರಿಯ ಕಾಂಗ್ರೆಸ್ ನಾಯಕ ಪಿಕೆ ರಾಜು ಪೂಜಾರಿಯೂ ಕೂಡ ಶಾಸಕ ಹರೀಶ್ ಪೂಂಜಾ ಅವರನ್ನು ಅಭಿನಂದಿಸಿ ಪತ್ರಿಕೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಮಾಜಿ ಶಾಸಕ ವಸಂತ ಬಂಗೇರರಿಗೆ ಈ ಬೆಳವಣಿಗೆ ಮುಜುಗರವಾಗಿದ್ದು, ತಮ್ಮ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ನಾಯಕರುಗಳಿಂದ ಪ್ರಶಂಸೆಗೊಳಪಟ್ಟಿದ್ದು, ಈಗ ಕಾಂಗ್ರೆಸಿಗೆ ಮುಜುಗರ ತರಿಸಿದೆ, ಇದರಿಂದ ಬಂಗೇರ ಬಹಳಷ್ಟು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.