ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕರ್ತನೊಬ್ಬ ಹರೀಶ್ ಪೂಂಜಾರನ್ನು ಹೊಗಳುವ ಭರದಲ್ಲಿ ಶಾಸಕರು ಹಣದ ಚೀಲದಿಂದ ಹೋದವರಿಗೆಲ್ಲಾ ಹತ್ತತ್ತು ಸಾವಿರದ ಕಟ್ಟನ್ನೇ ಕೊಡುತ್ತಾರೆ ಎಂದಿದ್ದು, ಇದೀಗ ಆ ಹೊಗಳಿಕೆಯೇ ಶಾಸಕರ ಕುರ್ಚಿಗೆ ಸಂಚಕಾರ ತಂದೊಡ್ಡಿದೆ.
ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಬಳಂಜ ಎಂಬವರು ತಮ್ಮ ಭಾಷಣದಲ್ಲಿ ಶಾಸಕರ ಸಾಧನೆಯನ್ನು ವೈಭವೀಕರಿಸುತ್ತಾ ಶಾಸಕರ ಸಮ್ಮುಖದಲ್ಲೇ “ಹರೀಶ್ ಪೂಂಜಾರವರ ಮನೆಗೆ ನಾನು ಹೋಗಿದ್ದೆ. ಪೂಂಜಾರವರು ಒಳಗೆ ಹೋಗಿ 10,000 ರೂ ಹಣವನ್ನು ಒಂದು ಹೆಂಗಸಿಗೆ ಕೊಟ್ಟರು. ಬಳಂಜದ ಬಾಲಕೃಷ್ಣ ಪೂಜಾರಿ ಎಂಬವರಿಗೂ 10,000 ರೂ. ಹಣವನ್ನು ಕೊಟ್ಟರು. ಪೂಂಜಾರವರ ಕಛೇರಿಗೆ ಹೋಗಿ ನೋಡಿ, ಅಲ್ಲಿ ದಿನಾಲು ಒಳಗಿನಿಂದ ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ಪೂಂಜಾರವರು ತರುತ್ತಾರೆ. ಕೇಳಿದವರಿಗೆಲ್ಲಾ ಹತ್ತತ್ತು ಕೊಡುತ್ತಾರೆ. ಇದು ಸತ್ಯ” ಎಂದು ಹೇಳಿದ್ದರು.
ಇದೀಗ ಇದೇ ಹೇಳಿಕೆ ಶಾಸಕರಿಗೆ ಮುಳುವಾಗಿದ್ದು, ಈ ಹೇಳಿಕೆಯನ್ನೇ ಆಧಾರವಾಗಿಟ್ಟು ಕಮ್ಯೂನಿಸ್ಟ್ ಪಕ್ಷದ ಶೇಖರ್ ಎಸಿಬಿ, ಈಡಿ ಗೆ ಕೇಸ್ ನೀಡಿದ್ದಾರೆ. ದಿನಾಲೂ ಚೀಲದಲ್ಲಿ ಹಣತಂದು ಕೊಡ್ತಾರೆ ಎಂದು ಪ್ರತ್ಯಕ್ಷದರ್ಶಿಯ ಹೇಳಿಕೆಗೆ ಅಲ್ಲೇ ಇದ್ದ ಶಾಸಕರು ಮೌನಸಮ್ಮತಿ ನೀಡಿದ್ದಾರೆ. ಈ ರೀತಿ ಮನೆಗೆ ಬಂದವರಿಗೆ 10,000 ರೂ., 20,000 ರೂ. ಸಾವಿರ ಹಣವನ್ನು ಶಾಸಕರು ನೀಡುತ್ತಾರೆಂದರೆ, ಅವರಲ್ಲಿ ಆದಾಯಕ್ಕೆ ಮೀರಿದ ಹಣವಿರಬೇಕು. ಆ ಹಣದ ಮೂಲ ಬಹಿರಂಗವಾಗಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈಬಗ್ಗೆ ಕಾಂಗ್ರೆಸ್ ಕೂಡಾ ದೂರು ನೀಡಿದ್ದು, ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಅವರ ಹೇಳಿಕೆಯ ಆಧಾರದ ಮೇಲೆ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಕೇಸು ದಾಖಲಿಸಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಮನೆ ಮತ್ತು ಕಛೇರಿಯ ಶೋಧ ಕಾರ್ಯನಡೆಸಿ ನ್ಯಾಯ ಒದಗಿಸಬೇಕಾಗಿ ಈ ಮೂಲಕ ಕೋರುತ್ತೇವೆ. ಅಲ್ಲದೆ, ಈ ಹೇಳಿಕೆಯನ್ನು ಕೊಟ್ಟಿರುವ ಮತ್ತು ಪ್ರತ್ಯಕ್ಷದರ್ಶಿಯಾಗಿರುವ ಹರೀಶ್ ವೈ ಚಂದ್ರಮ ಬಳೆಂಜರವರನ್ನು ಕೂಡ ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಹಾಗೂ ಹೇಳಿಕೆದರನಾಗಿ PMLA 2002 ರ ಕಲಂ 3 ರ ಪ್ರಕಾರ ಪರಿಗಣಿಸಿ ವಿಚಾರಣೆ ಮಾಡಬೇಕಾಗಿ ಕೋರುತ್ತಿದ್ದೇವೆ ಎಂದು ಹೇಳಿದೆ.
ಕೋಮುವಾದದ ಆಶ್ರಯ ಪಡೆಯಲು ಮುಸ್ಲಿಮರ ಮತ ಬೇಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಶಾಸಕ ಹರೀಶ್ ಪೂಂಜಾ ಇದೀಗ ತನ್ನ ಅಭಿಮಾನಿಯ ಹೊಗಳಿಕೆಯಿಂದಾಗಿ ಕಷ್ಟ ಅನುಭವಿಸುವಂತಾಗಿದೆ.