ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರನ್ನು ಬೆನ್ನತ್ತಿ ಬೆದರಿಕೆಯೊಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ತನಿಖಾಧಿಕಾರಿಯಲ್ಲಿರುವ ದಾಖಲೆಗಳನ್ನು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಐಡಿ ತನಿಖಾ ಕಚೇರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಡಿಜಿಪಿಯವರ ಪರವಾಗಿ ಆರ್. ಹಿತೇಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅ.13ರಂದು ರಾತ್ರಿ ಫರಂಗಿಪೇಟೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಇನ್ನೊಂದು ಕಾರಿನಲ್ಲಿ ವ್ಯಕ್ತಿಯೋರ್ವ ಬೆನ್ನಟ್ಟಿ ಅಡ್ಡಗಟ್ಟಿ ತಲ್ವಾರು ತೋರಿಸಿ ಬೆದರಿಸಿರುವುದಾಗಿ ಶಾಸಕರ ಕಾರು ಚಾಲಕ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಂಗಳೂರು ಫಳ್ನೀರ್ ನಿವಾಸಿ ರಿಯಾಝ್(38) ಎಂಬವರನ್ನು ಬಂಧಿಸಿದ್ದರು. ಆರೋಪಿಗೆ ಕಾರು ಓವರ್ ಟೇಕ್ ಮಾಡಲು ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಸ್ಪಷ್ಟನೆ ನೀಡಿದ್ದರು. ಬಂಧಿತ ರಿಯಾಝ್ ಅವರಿಗೆ ಅ.16ರಂದು ಬಂಟ್ವಾಳ ಪ್ರಥಮ ದರ್ಜೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.