ದೇಶದಲ್ಲಿ ನರಮೇಧದ ಚಹರೆ !

Prasthutha|

ಹರಿದ್ವಾರದ ದ್ವೇಷ ಭಾಷಣ: ಮುಸ್ಲಿಮರ ನರಹತ್ಯೆಯ ಪೂರ್ವಸಿದ್ಧತೆ?

- Advertisement -

ಜಗತ್ತಿನಲ್ಲಿರುವ ಬಹುತೇಕ ಧರ್ಮ ಅಥವಾ ಅದರ ಗ್ರಂಥಗಳು ಅಹಿಂಸೆಯನ್ನೇ ಬೋಧಿಸಿವೆ. ಆದರೆ ಆರೆಸ್ಸೆಸ್ ಹಿಂದುತ್ವವಾದಿಗಳು ತಮ್ಮ ಧರ್ಮರಕ್ಷಣೆಯ ಹೆಸರಿನಲ್ಲಿ ಇತರ ಧರ್ಮದವರನ್ನು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ದಾಳಿ ನಡೆಸಲು ಪ್ರಚೋದಿಸುತ್ತಾರೆ. ಕಳೆದ ಡಿಸೆಂಬರ್‌ ನಲ್ಲಿ ಹರಿದ್ವಾರ ಮತ್ತು ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ ನಲ್ಲಿ ಮುಸ್ಲಿಮರ ನರಮೇಧಕ್ಕೆ ಬಹಿರಂಗ ಕರೆ ನೀಡಿ ದ್ವೇಷ ಭಾಷಣ ಮಾಡಲಾಗಿದೆ. ಇಂತಹ ದ್ವೇಷ ಭಾಷಣಗಳು ಇದು ಮೊದಲೇನಲ್ಲ. ಹಿಂದೂ ಸಮಾಜೋತ್ಸವ, ಧರ್ಮ ಸಂಸತ್ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವೇ ಮುಸಲ್ಮಾನರು ಮತ್ತು ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಹುಸಂಖ್ಯಾತರನ್ನು ಕೆರಳಿಸುವುದಾಗಿದೆ. 1992ರ ನಂತರ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ದ್ವೇಷ ಭಾಷಣಗಳು ಸಾಮಾನ್ಯವಾಗಿದೆ. ಇವರು ಕಾನೂನಿನ ಯಾವುದೇ ಭಯವಿಲ್ಲದೆ ಓಡಾಡುತ್ತಿದ್ದಾರೆ. ಕಾಟಾಚಾರಕ್ಕೆ ಪ್ರಕರಣ ದಾಖಲಿಸುವ ಪೊಲೀಸರು ಅಧಿಕಾರಸ್ಥರ ಒತ್ತಡ ಬಂದಾಗ ಅದನ್ನೂ ಮೂಲೆಗೆಸೆದು ಕೃತಾರ್ಥರಾಗುತ್ತಾರೆ.

ವಿಭಜಕ ಶಕ್ತಿಗಳ ದ್ವೇಷ ಕಾರುವ ಭಾಷಣಕ್ಕೆ ಒಂದು ಶತಮಾನದ ಇತಿಹಾಸವಿದೆ. 1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್‌ ಗೆ ಜರ್ಮನಿಯ ನರಹಂತಕ ಹಿಟ್ಲರ್ ಮತ್ತು ಇಟೆಲಿಯ ಮುಸೋಲಿನಿಯೇ ಆದರ್ಶಪ್ರಾಯರು. ಆರೆಸ್ಸೆಸ್ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆ ಹಲವು ಬಾರಿ ಸರ್ವಾಧಿಕಾರಿ ಹಿಟ್ಲರ್‌ ನನ್ನು ಭೇಟಿಯಾಗಿ ತಮ್ಮ ಸಂಘಟನೆಯ ರೂಪುರೇಷೆ ನೀಡಿದ್ದರು. ಇದರ ಪರಿಣಾಮ ಹಿಂದೂ ರಾಷ್ಟ್ರೀಯವಾದಿಗಳ ಮೇಲೆ ಫ್ಯಾಶಿಸಂ ಮತ್ತು ನಾಝಿಸಂ ಸಿದ್ಧಾಂತಗಳು ಗಾಢ ಪ್ರಭಾವ ಬೀರುವಂತಾಯಿತು. ಅವರ ಪಾಲಿಗೆ ಇಟಲಿ ಮತ್ತು ಜರ್ಮನಿಗಳು ಸ್ಫೂರ್ತಿಯ ಸೆಳೆಗಳಿಂತಿದ್ದವು. ಅವರು ಜರ್ಮನಿಯ ಜನಾಂಗವಾದಿ ನೀತಿ ಹಾಗೂ ಅಲ್ಲಿನ ಯಹೂದ್ಯರ ಸಮಸ್ಯೆಯನ್ನು ಭಾರತದ ಮುಸ್ಲಿಮರಿಗೆ ಹೋಲಿಸುತ್ತಿದ್ದರು. ಹಿಂದೂ ಸೇನೆಯನ್ನು ಆರಂಭಿಸುವ ಕುರಿತಂತೆ 1939ರ ಅಕ್ಟೋಬರ್‌ ನಲ್ಲಿ ಪುಣೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೂಂಜೆ, ಅದು ಒಳಗಿನ ಮತ್ತು ಹೊರಗಿನ ಶತ್ರುಗಳನ್ನು ಎದುರಿಸುವ ಉದ್ದೇಶವನ್ನು ಹೊಂದಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.

- Advertisement -

ಆರೆಸ್ಸೆಸ್‌ ನ ಮತ್ತೊಬ್ಬ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಬರೆದ ‘ಬಂಚ್ ಆಫ್ ಥಾಟ್ಸ್’ ಎಂಬ ಕೃತಿಯಲ್ಲಿ ಹಿಂದೂಸ್ತಾನಕ್ಕೆ ಮುಸ್ಲಿಮರು ಕಾಲಿರಿಸಿದ ಆ ಪ್ರಥಮ ಕರಾಳ ದಿನದಿಂದ ಮೊದಲ್ಗೊಂಡು ಇಲ್ಲಿಯ ತನಕ ಹಿಂದೂ ರಾಷ್ಟ್ರವು ಲೂಟಿಕೋರರನ್ನು ಹೊರದಬ್ಬುವ ಸಲುವಾಗಿ ಧೀರೋದಾತ್ತ ಹೋರಾಟ ನಡೆಸುತ್ತಾ ಬಂದಿದೆ ಹಾಗೂ ಜನಾಂಗ ಪ್ರಜ್ಞೆ ಎಚ್ಚೆತ್ತುಕೊಳ್ಳತೊಡಗಿದೆ ಎಂದು ಬರೆದಿದ್ದಾರೆ. ಈ ಪುಸ್ತಕದ ‘ಆಂತರಿಕ ಅಪಾಯಗಳು’ ಎಂಬ ಮತ್ತೊಂದು ಅಧ್ಯಾಯದಲ್ಲಿ ‘ಮುಸ್ಲಿಮರು ಪ್ರಥಮ ಅಪಾಯವೆಂದೂ ಕ್ರೈಸ್ತರು ದ್ವಿತೀಯ ಅಪಾಯವೆಂದೂ’ ಉಲ್ಲೇಖಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ 17ರಿಂದ 19ರ ವರೆಗೆ ಹರಿದ್ವಾರದಲ್ಲಿ ಹಿಂದೂ ರಕ್ಷಣಾ ಸಮಾವೇಶದ ಹೆಸರಿನಲ್ಲಿ ಸಾಧುಸಂತರ ಮುಖವಾಡದಲ್ಲಿದ್ದ ನರಹಂತಕರು ಮುಸ್ಲಿಮರ ನರಮೇಧಕ್ಕೆ ಬಹಿರಂಗ ಕರೆಕೊಡಲು ಪ್ರೇರಣೆ ಆರೆಸ್ಸೆಸ್‌ ನ ಈ ವಿಚಾರಧಾರೆಯಾಗಿದೆ. ಮ್ಯಾನ್ಮಾರ್‌ ನಲ್ಲಿ ಜನಾಂಗೀಯ ಶುದ್ಧೀಕರಣ ಮಾಡಿದಂತೆ ಇಲ್ಲಿಯೂ ಜನಾಂಗೀಯ ಶುದ್ಧೀಕರಣ ಮಾಡಬೇಕು. ಇದಕ್ಕಾಗಿ ಪ್ರತಿಯೊಬ್ಬ ಹಿಂದೂ ಸಾಯಲು ಮತ್ತು ಸಾಯಿಸಲು ಸಿದ್ಧನಾಗಬೇಕು. ದೇಶದ ಹಿಂದೂಗಳು, ಪೊಲೀಸರು, ಸೈನಿಕರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಬೇಕು. ಈ ಮೂಲಕ ಈ ಶುದ್ಧೀಕರಣ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಸ್ವಾಮಿ ಪ್ರಬೋಧಾನಂದ ಎಂಬವರು ಕರೆ ನೀಡಿದ್ದರು.

ನೀವು ಈಗ ಕೇವಲ ಕತ್ತಿಯಿಂದ ಹೋರಾಡಲು ಸಾಧ್ಯವಿಲ್ಲ. ಶತ್ರುವಿನ ಬಳಿ ಇರುವ ಶಸ್ತ್ರಕ್ಕಿಂತಲೂ ಬಲಾಢ್ಯವಾದ ಆಯುಧ ನಿಮ್ಮ ಬಳಿ ಇರಬೇಕು. ನೀವು ಹೊರಗೆ ಹೋಗುವಾಗ ಆಯುಧ ತೆಗೆದುಕೊಂಡು ಹೋಗಿ ಮನೆಯಲ್ಲೂ ಸದಾ ಒಂದು ಆಯುಧ ಇಟ್ಟಿರಬೇಕು. ಮನೆಗೆ ಯಾರಾದರೂ ನುಗ್ಗಿದರೆ ಅವರು ಜೀವಂತವಾಗಿ ಹೊರಗೆ ಹೋಗಬಾರದು. ನಿಮ್ಮ ಮೊಬೈಲ್ ಕೇವಲ ರೂ. 5000 ಮೊತ್ತದ್ದಾಗಿರಲಿ, ಆದರೆ ಆಯುಧದ ಬೆಲೆ ಕನಿಷ್ಠ ಒಂದು ಲಕ್ಷವಾಗಿರಲಿ ಎಂದು ಸ್ವಾಮಿ ಸಾಗರಸಿಂಧು ಮಹಾರಾಜ್ ಕರೆ ನೀಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೆ ಪ್ರಾಥಮಿಕ ಹಕ್ಕು ಇರುವುದು ಎಂದು ಹೇಳಿದ್ದರು. ಅದನ್ನು ನಾನು ಓದಿದ್ದೆ. ಆಗ ಸಂಸದನಾಗಿದ್ದು, ಸಂಸತ್ ಭವನದಲ್ಲಿ ಇದ್ದಿದ್ದರೆ ನಾನು ನಾಥುರಾಮ್ ಗೋಡ್ಸೆಯಾಗುತ್ತಿದ್ದೆ. ಮನಮೋಹನ್ ಸಿಂಗ್ ಎದೆಗೆ ಆರು ಗುಂಡುಗಳನ್ನು ಹಾರಿಸಿ ಕೊಲ್ಲುತ್ತಿದ್ದೆ ಎಂದು ಧರಂದಾಸ್ ಮಹಾರಾಜ್ ಹೇಳಿದ್ದಾರೆ. ಪೂಜಾ ಶಕುನ್ ಪಾಂಡೆ ಅಲಿಯಾಸ್ ಸಾಧ್ವಿ ಅನ್ನಪೂರ್ಣ ಎಂಬ ಮಹಿಳೆ ‘ಒಂದು ನೂರು ಜನ ಹಿಂದೂಗಳು ಕನಿಷ್ಠ 20 ಲಕ್ಷ ಮುಸ್ಲಿಮರನ್ನು ಕೊಲ್ಲಬೇಕು’ ಎಂದು ಕರೆ ಕೊಡುತ್ತಾರೆ. ಆ ಸಮಾವೇಶದಲ್ಲಿ ಮುಖ್ಯವಾಗಿ ‘ಇಸ್ಲಾಮೀ ಭಾರತದಲ್ಲಿ ಸನಾತನ ಹಿಂದೂಗಳ ಭವಿಷ್ಯ, ಸಮಸ್ಯೆ ಮತ್ತು ಸವಾಲುಗಳು’ ಎಂಬ ಪ್ರಬಂಧ ಮಂಡನೆಯನ್ನು ಆಧಾರವಾಗಿಟ್ಟುಕೊಂಡು ನಡೆದ ಚರ್ಚೆಯೇ ಪ್ರಚೋದನಾತ್ಮಕವಾಗಿತ್ತು. ಈ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬನಾಗಿರುವ ಯತಿ ನರಸಿಂಗಾನಂದ 2020ರ ದಿಲ್ಲಿ ಹತ್ಯಾಕಾಂಡಕ್ಕೆ ಸಕಲ ತರಬೇತಿ, ವ್ಯವಸ್ಥೆ, ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ಪ್ರಮುಖ ಆರೋಪಿ ಕೂಡ ಆಗಿದ್ದಾನೆ.

ಛತ್ತೀಸ್‌ ಗಡದಲ್ಲಿ ಜರುಗಿದ ಮತ್ತೊಂದು ಧರ್ಮಸಂಸತ್ತಿನ ವೇದಿಕೆಯಲ್ಲಿ ಕಾಳಿಚರಣ್ ಮಹಾರಾಜ್ ಎಂಬ ಸಂತನ ಮುಖವಾಡದಲ್ಲಿದ್ದ ವ್ಯಕ್ತಿಯೊಬ್ಬ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ ಕೈಮುಗಿದು, ಗಾಂಧೀಜಿಯನ್ನು ದೇಶ ಹಾಳುಗೆಡವಿದ ಹರಾಮ್ಕೋರ ಎಂದು ಹಿಯಾಳಿಸಿದರು. ಈ ರೀತಿ ಘೋರ ನಿಂದನೆ ಮಾಡಿದ ನಂತರ ಆ ಕುರಿತು ನನಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದೂ ಆತ ಹೇಳಿಕೊಂಡಿದ್ದಾರೆ.

ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನ ಮಾಡಿ ಅಧಿಕಾರಕ್ಕೆ ಬಂದ ಸಂಸದ ತೇಜಸ್ವಿ ಸೂರ್ಯ ಉಡುಪಿ ಕೃಷ್ಣ ಮಠದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ‘‘ಹಿಂದೂ ಧರ್ಮದಿಂದ ಕ್ರೈಸ್ತ, ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದರೆ ಸಾಲದು. ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನೂ ಹಿಂದೂಗಳಾಗಿ ಪರಿವರ್ತಿಸಬೇಕಾಗಿರುವುದು ಹಿಂದೂಗಳ ಆದ್ಯ ಕರ್ತವ್ಯವಾಗಬೇಕು. ಮನೆಯ ಪಕ್ಕದಲ್ಲಿರುವ ಮೊಹಲ್ಲಾದಲ್ಲಿರುವವರನ್ನು ಹಿಂದೂ ಧರ್ಮಕ್ಕೆ ಕರೆ ತರುವುದಲ್ಲ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ದೊಡ್ಡ ಕನಸುಗಳನ್ನು ಕಾಣಬೇಕು. ಭ್ರಾಂತಿಯಿಂದ ಹೊರಬಂದು ಹಿಂದೂ ಧರ್ಮದ ಪುನರುತ್ಥಾನ ಮಾಡಬೇಕು. ಈ ಮೂಲಕ ಭಾರತ ಪ್ರಪಂಚಕ್ಕೆ ಜಗದ್ಗುರುವಾಗಬೇಕು. ಹಿಂದೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿದು ಹಿಂದೂ ಧರ್ಮ ತ್ಯಜಿಸಿದವರನ್ನೆಲ್ಲ ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಪ್ರತಿ ದೇವಸ್ಥಾನ ಹಾಗೂ ಮಠಗಳು ವಾರ್ಷಿಕ ಗುರಿ ಇಟ್ಟುಕೊಳ್ಳಬೇಕು. ಟಿಪ್ಪುಜಯಂತಿಯಂದೇ ಹಿಂದೂ ಧರ್ಮಕ್ಕೆ ಕರೆತರುವ ಕೆಲಸ ಆರಂಭವಾಗಬೇಕು’’ ಎಂದಿದ್ದರು. ಉಡುಪಿ ಮಠದಲ್ಲಿ ಈ ಸಂಸದ ಮಾಡಿದ ಭಾಷಣದ ವಿಷಯ ಹಿಂದೂ ಅಸ್ಮಿತೆಯ ಪುನರುತ್ಥಾನ-ಸವಾಲುಗಳು ಎಂಬುದಾಗಿತ್ತು. ಹಿಂದೂ ಅಸ್ಮಿತೆಯ ಪುನರುತ್ಥಾನಕ್ಕೆ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮಾತ್ರವಲ್ಲ, ಸಮಾಜವಾದ ಹಾಗೂ ಸೆಕ್ಯುಲರಿಸಂಗಳು ಕೂಡಾ ದೊಡ್ಡ ಅಪಾಯಕಾರಿ ಎಂದು ಘೋಷಿಸಿದರು. ಅದಕ್ಕೆ ಇರುವ ಏಕೈಕ ಹಾಗೂ ಫೈನಲ್ ಸೊಲ್ಯುಷನ್ ಎಂದರೆ ಭಾರತವನ್ನು ಸಂಪೂರ್ಣವಾಗಿ ಹಿಂದೂಕರಿಸುವುದು ಎಂದೂ ಹೇಳಿದ್ದರು. ಅನ್ಯಮತೀಯರನ್ನು ಮರುಮತಾಂತರಗೊಳಿಸುವ ಶುದ್ಧೀಕರಣ ಕ್ರಿಯೆಯನ್ನು ಪ್ರಪ್ರಥಮವಾಗಿ ಆರಂಭಿಸಿದ ಶ್ರೇಯಸ್ಸು ಆರೆಸ್ಸೆಸ್ ಸಂಸ್ಥಾಪಕ ಡಾ.ಮೂಂಜೆಗೆ ಸಲ್ಲುತ್ತದೆ.

ಹರಿದ್ವಾರದಲ್ಲಿ ಯಾವ ಹಿಂದೂಯೇತರರಿಗೂ ಹಿಂದೂವಾಗದೆ ಉಳಿಗಾಲವಿಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಬೇಕು ಎಂದು ಕರೆ ನೀಡಿದ ಸಾಧುಗಳ ಕರೆಯನ್ನು ಅನುಸರಿಸುವುದೇ ಸಂಘದ ಅಂಗೀಕೃತ ಧ್ಯೇಯವಾಗಿದೆ ಎಂಬುದು ಸಂಸದ ತೇಜಸ್ವಿಯ ಭಾಷಣದ ಇಂಗಿತವಾಗಿತ್ತು. ಫೈನಲ್ ಸೊಲ್ಯೂಷನ್  ಎಂದು ಹೇಳಿದ ಸೂರ್ಯರ ಹೇಳಿಕೆ ಜರ್ಮನಿಯ ನಾಝಿಗಳ ನರಹಂತಕ ಯೋಜನೆಯ ಭಾರತೀಯ ರೂಪವಾಗಲಿದೆ.

ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಕಮ್ಯುನಿಸ್ಟರು, ವಿರೋಧ ಪಕ್ಷಗಳು, ಯಹೂದಿಗಳು ಹಾಗೂ ಆರ್ಯ ಜರ್ಮನ್ನರಲ್ಲದ ಜನಾಂಗಗಳು ಎಂಬುದು ನಾಝಿಗಳ ಧೋರಣೆಯಾಗಿತ್ತು. ಹೀಗಾಗಿ ಆರ್ಯ ಜರ್ಮನರ ಪುನರುತ್ಥಾನವೊಂದೇ ಜರ್ಮನಿಯ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂಬುದು ಹಿಟ್ಲರ್-ನಾಝಿಗಳ ಚಿಂತನೆಯಾಗಿತ್ತು. ಜಗತ್ತಿನಲ್ಲಿ ಜರ್ಮನ್ ಜನಾಂಗೀಯ ಶ್ರೇಷ್ಠತೆಗೆ ಮತ್ತು ನಾಝಿ ಚಿಂತನೆಗೆ ಅಡ್ಡಿಯಿದ್ದ ಎಲ್ಲಾ ಯಹೂದಿಗಳನ್ನು, ಜಿಪ್ಸಿಯಂತಹ ಅಲೆಮಾರಿಗಳನ್ನು, ಕಮ್ಯುನಿಸ್ಟರನ್ನು, ಭಿನ್ನಮತೀಯ ಕೆಥೊಲಿಕ್, ಪ್ರೊಟೆಸ್ಟೆಂಟರನ್ನು ಕೊಂದು ಹಾಕುವ ಫೈನಲ್ ಸೊಲ್ಯುಷನ್ ಜಾರಿ ಮಾಡಿದರು. 1942-45ರ ಮೂರು ವರ್ಷಗಳ ಅವಧಿಯಲ್ಲಿ ನಾಝಿಗಳು 60 ಲಕ್ಷ ಜನರನ್ನು, ಪ್ರಧಾನವಾಗಿ ಯಹೂದಿಗಳನ್ನು ನರಹತ್ಯೆ ಮಾಡಿದರು. ನಾಝಿಗಳ ಈ ಜನಾಂಗೀಯ ಶ್ರೇಷ್ಠತೆಯ ಫ್ಯಾಶಿಸಂನಿಂದಾಗಿ 43 ಲಕ್ಷ ಜರ್ಮನರೂ ಹತ್ಯೆಗೀಡಾದರು.

ನಾಝಿಗಳಿಂದ ಪ್ರೇರಿತರಾಗಿರುವ ಸಂಘಪರಿವಾರದವರ ಪ್ರಕಾರ ಭಾರತ ಹಿಂದೂ ದೇಶವಾಗಿದ್ದಾಗ ಮಾತ್ರ ಪುನರುತ್ಥಾನಗೊಳ್ಳಲು ಸಾಧ್ಯ. ಅದಕ್ಕೆ ಅಡ್ಡಿ ಇರುವವರು ಮುಸ್ಲಿಮರು, ಕ್ರಿಶ್ಚಿಯನ್ನರು, ಕಮ್ಯುನಿಸ್ಟರು, ಉದಾರವಾದಿ ಚಿಂತನೆಗಳ ವಕ್ತಾರರು ಮೊದಲಾದವರೆಲ್ಲ ಪರಸ್ಪರ ಸೌಹಾರ್ದತೆಯಿಂದ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡುತ್ತಿರುವ ಪ್ರಜಾತಂತ್ರ ಮತ್ತು ಸಂವಿಧಾನವು ಸಂಘಪರಿವಾರದ ಮಟ್ಟಿಗೆ ಗಂಟಲ ಮುಳ್ಳಾಗಿದೆ. ಕಳೆದ ನೂರು ವರ್ಷಗಳಿಂದಲೂ ಸಂಘಪರಿವಾರ ಹಲವು ಮಾರಕ ಯೋಜನೆಗಳನ್ನು ಹಂತಹಂತವಾಗಿ ಜಾರಿ ಮಾಡುತ್ತಾ ಬಂದಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗಳು ಈಗ ಪ್ರಭುತ್ವದ ಬಲ ಮತ್ತು ಶಾಸನ ಶಕ್ತಿಯನ್ನು ಪಡೆದುಕೊಂಡಿದೆ. ಭಾರತದಲ್ಲಿರುವ 21 ಕೋಟಿ ಮುಸ್ಲಿಮರು ಮತ್ತು 3 ಕೋಟಿ ಕ್ರಿಶ್ಚಿಯನ್ನರನ್ನು ಕೊಲ್ಲಲು ಸಾಧ್ಯವಿಲ್ಲ. ಬೇರೆ ಯಾವುದೇ ದ್ವೀಪಕ್ಕೆ ಅಟ್ಟಲೂ ಆಗುವುದಿಲ್ಲ. ಹೀಗಾಗಿ ಸಂಘಪರಿವಾರಕ್ಕೆ ಇರುವ ಏಕೈಕ ದಾರಿ ಎಂದರೆ ಫೈನಲ್ ಸೊಲ್ಯುಷನ್. ಅಂದರೆ ಈ ವರ್ಗಗಳನ್ನು- ಸಾಂವಿಧಾನಿಕವಾಗಿ ಮತ್ತು ಹಿಂಸಾತ್ಮಕವಾಗಿ ರಾಷ್ಟ್ರವಾಹಿನಿಯಿಂದ ಹೊರಗಟ್ಟಿ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಬೇಕು ಎಂಬುದು ಸಂಘಪರಿವಾರದ ಗುರಿಯಾಗಿದೆ.

ಸಿಎಎ-ಎನ್‌ ಪಿಆರ್-ಎನ್‌ ಆರ್‌ ಸಿ, ಮತಾಂತರ ನಿಷೇಧ ಕಾಯ್ದೆಗಳು, ಆರ್ಟಿಕಲ್ 370 ರದ್ದು, ಲವ್ ಜಿಹಾದ್, ಗೋಹತ್ಯಾ ನಿಷೇಧ, ಹೊಸದಾಗಿ ಜಾರಿಯಾಗುತ್ತಿರುವ ಡಿ-ಲಿಮಿಟೇಷನ್ ಪ್ರಕ್ರಿಯೆಗಳು, ಗುಜರಾತ್ ಹತ್ಯಾಕಾಂಡ, ಮುಝಫ್ಫರ್‌ ನಗರ, ದಿಲ್ಲಿಯಂತಹ ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡಗಳು, ಗುಂಪು ಹತ್ಯೆಗಳು, ಚಿಂತಕರನ್ನು, ಪತ್ರಕರ್ತರನ್ನು, ರೈತರನ್ನು, ಕಾರ್ಮಿಕರನ್ನು ಕೊಂದುಹಾಕುವುದು ಅಥವಾ ಭಯೋತ್ಪಾದಕರೆಂದು ಕಠಿಣ ಕಾನೂನಿನಡಿಯಲ್ಲಿ ಜೈಲಿಗೆ ಕಳುಹಿಸುವುದು ಇತ್ಯಾದಿಗಳು ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ ವೇಗವಾಗುತ್ತಿರುವ ಫೈನಲ್ ಸೊಲ್ಯುಷನ್‌ ನ ಸೂಚನೆಯಾಗಿದೆ.

ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹ ನರಮೇಧಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಯಾವುದೇ ಯೋಜನೆಯಿಲ್ಲದೆ ಅಚಾನಕಾಗಿ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸುವ ಪೂರ್ವಯೋಜಿತ ಕರಾರು ವಾಕಾದ ಲೆಕ್ಕಾಚಾರದ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಜಿನೋಸೈಡ್ ವಾಚ್ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ. ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ಜಿನೋಸೈಡ್ ಎಮರ್ಜೆನ್ಸಿ ಹಂತ. ಇದಕ್ಕೆ ಮುಂಚಿನ ಹಂತ ಜಿನೋಸೈಡ್ ವಾರ್ನಿಂಗ್ ಹಂತ, ಅದಕ್ಕೆ ಪೂರ್ವಭಾವಿಯಾದ ಹಂತ ಜಿನೋಸೈಡ್ ವಾಚ್. ಭಾರತದ ಕಾಶ್ಮೀರ ಹಾಗೂ ಅಸ್ಸಾಮಿನಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಈ ಬಗೆಯ ಪರಿಸ್ಥಿತಿ ಉದ್ಭವವಾಗಿದೆಯೆಂದು ಈ ವರದಿ ಹೇಳುತ್ತಿದೆ. ಜಿನೋಸೈಡ್ ಎಮೆರ್ಜೆನ್ಸಿ ಹಾಗೂ ಜಿನೋಸೈಡ್ ವಾರ್ನಿಂಗ್ ಹಂತಗಳಲ್ಲಿರುವ ದೇಶಗಳಿಗೆ ಹೋಲಿಸಿದರೆ ಭಾರತದ ಈಗಿನ ವಿದ್ಯಮಾನವು ಅಪಾಯಕಾರಿ ಹಂತಕ್ಕೆ ತಲುಪುವ ಕಾಲ ದೂರವಿಲ್ಲ.

ನರಮೇಧಗಳ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸುತ್ತಿರುವ ಅಮೆರಿಕಾದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧ ಕ್ಲೈಮ್ಯಾಕ್ಸ್ ತಲುಪುವ ಮುನ್ನ ಸಮಾಜ ಹಾದುಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ.

ನರಮೇಧಗಳ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸುತ್ತಿರುವ ಅಮೆರಿಕಾದ ಪ್ರೊಫೆಸರ್ ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧ ಕ್ಲೈಮ್ಯಾಕ್ಸ್ ತಲುಪುವ ಮುನ್ನ ಸಮಾಜ ಹಾದುಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ.

1.Classification (ವರ್ಗೀಕರಣ): ಪ್ರತಿಯೊಂದು ಸಂಸ್ಕೃತಿಯಲ್ಲಿ ಜನರನ್ನು ಗುರುತಿಸಲು ನಾವು ಮತ್ತು ಅವರು ಎಂಬ ಜನಾಂಗೀಯ, ಬುಡಕಟ್ಟು, ಧರ್ಮ ಅಥವಾ ರಾಷ್ಟ್ರೀಯತೆಯ ಗುಂಪುಗಳ ಆಧಾರವನ್ನು ಪ್ರಯೋಗಿಸಲಾಗುತ್ತದೆ. ಪೌರತ್ವದ ನಿರಾಕರಣೆ ಅಥವಾ ರದ್ದುಪಡಿಸುವಿಕೆ ವಿಶೇಷವಾಗಿ ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿ ಕಾನೂನಿನ ಮೂಲಕ ಆ ಗುಂಪಿನ ಮಾನವ ಹಕ್ಕನ್ನು ನಿರ್ಬಂಧಿಸುವುದು. ನಾಝಿ ಜರ್ಮನಿಯಲ್ಲಿ ನಡೆದ ಯಹೂದಿ ನರಮೇಧದ ಮೊದಲ ಹೆಜ್ಜೆ ಕಾನೂನಿನ ಮೂಲಕ ಪೌರತ್ವ ನಿರಾಕರಣೆಯಾಗಿತ್ತು. 1982ರಲ್ಲಿ ಮ್ಯಾನ್ಮಾರ್‌ ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ದಮನಿಸಲು ಇದೇ ಪೌರತ್ವ ರದ್ದತಿಯ ಅಸ್ತ್ರವನ್ನು ಬಳಸಲಾಗಿತ್ತು. ಭಾರತದ ಮೋದಿ ಸರಕಾರವು 2019ರಲ್ಲಿ ಎನ್‌ ಆರ್‌ ಸಿ ಕಾನೂನಿನ ಮೂಲಕ ಮುಸ್ಲಿಂ ನಿರಾಶ್ರಿತರಿಗೆ ಪೌರತ್ವ ನಿರಾಕರಣೆಗೆ ಮುಂದಾಗಿತ್ತು. ಇತಿಹಾಸದ ಪುಟ ತಿರುಗಿಸಿದರೆ ಅಮೆರಿಕದ ಸರಕಾರ ಮೂಲ ಅಮೆರಿಕನ್ನರಿಗೆ 1924ರ ವರೆಗೆ ಯಾವುದೇ ಪೌರತ್ವವನ್ನು ನೀಡಿರಲಿಲ್ಲ. ಮಾತ್ರವಲ್ಲದೆ, ಆಗಿನ ಸರಕಾರ ಮೂಲ ಅಮೆರಿಕನ್ನರ ಜನಸಂಖ್ಯೆಯನ್ನು ನರಮೇಧದ ಮೂಲಕ ನಾಶಗೊಳಿಸಲು ಪ್ರಯತ್ನಿಸಿತ್ತು.

2. Symbolisation(ಸಂಕೇತಿಕರಣ): ನಾವು ಪ್ರತಿಯೊಂದು ಜನಸಮೂಹವನ್ನು ಒಂದೊಂದು ಹೆಸರಿನೊಂದಿಗೆ ಸಮೀಕರಿಸುತ್ತೇವೆ ಅಥವಾ ಒಂದು ಸಂಕೇತದ ಮೂಲಕ ಅದನ್ನು ವಿಂಗಡಿಸುತ್ತೇವೆ. ಉದಾಹರಣೆಗೆ ನಾವು ಕೆಲವು ಜನಾಂಗದವರನ್ನು ಯಹೂದಿಗಳು ಅಥವಾ ಅಲೆಮಾರಿಗಳು ಎಂದು ಪ್ರತ್ಯೇಕಿಸುತ್ತೇವೆ. ಬಣ್ಣ ಅಥವಾ ಉಡುಪುಗಳ ಆಧಾರದಲ್ಲಿ ವಿಭಜಿಸುವುದೂ ಇದೆ. ಈ ವಿಭಜನೆಯ ಬಳಿಕ ಅದರ ಸದಸ್ಯರನ್ನು ಒಂದು ನಿಗದಿತ ಗುರುತಿನ ಆಧಾರದಲ್ಲಿ ಸಂಬೋಧಿಸುತ್ತೇವೆ. ಇದು ಸಾಮಾನ್ಯವಾಗಿ ನರಮೇಧದಂತಹ ಕಿರಾತಕ ಕಾರ್ಯವೆಸಗಲು ಮಾರ್ಗವಾಗುವುದಿಲ್ಲ. ಆದರೆ ಕೆಲವು ಅಮಾನವೀಯ ಮನಸ್ಸುಗಳು ಈ ಐಡೆಂಟಿಟಿಯನ್ನು ನರಮೇಧಕ್ಕೆ ಬಳಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಗುರುತಿಸುವಿಕೆಗಾಗಿ ಮಾಡಿಕೊಂಡ ವಿಭಜನೆ ಕೆಲವೊಮ್ಮೆ ಆಯಾ ಗುಂಪಿನ ನಾಯಕರ ಸ್ವಾರ್ಥ ಹಿತಾಸಕ್ತಿಗಾಗಿ ಶ್ರೇಷ್ಠ-ಕನಿಷ್ಠದ ಮಾನದಂಡವಾಗಿ ಪರಿಣಮಿಸಿ ರಕ್ತಪಾತಕ್ಕೆ ಕಾರಣವಾಗುವುದೂ ಇದೆ.

3. Discrimination (ತಾರತಮ್ಯ): ಒಂದು ಪ್ರಬಲವಾದ ಗುಂಪು ಕಾನೂನು, ರಾಜಕೀಯ ಬಲ, ಜನಬಲ ಮತ್ತು ಪ್ರಭಾವದ ಮೂಲಕ ಬೇರೊಂದು ನಿರ್ದಿಷ್ಟ ಗುಂಪಿನ ಹಕ್ಕನ್ನು ನಿರಾಕರಿಸುತ್ತದೆ. ಅಧಿಕಾರದ ಆಯಕಟ್ಟಿನ ಜಾಗದಲ್ಲಿರುವ ಗುಂಪು ಅಧಿಕಾರ ರಹಿತ ಗುಂಪುಗಳಿಗೆ ನಾಗರಿಕ ಹಕ್ಕನ್ನು ಪೂರ್ತಿ ನೀಡುವುದಿಲ್ಲ. ಇದರ ಜೊತೆಗೆ ಕೆಲವೆಡೆಗಳಲ್ಲಿ ಅವರ ಮತ ಚಲಾಯಿಸುವ ಹಕ್ಕನ್ನೂ ನಿರ್ಬಂಧಿಸಲಾಗುತ್ತದೆ. ಈ ಪ್ರಬಲ ಗುಂಪುಗಳು ಅಧಿಕಾರ ಹಾಗೂ ಮೂಲಭೂತ ಹಕ್ಕುಗಳಿಂದ ವಂಚಿತರಾದ ಗುಂಪನ್ನು ಸಿದ್ಧಾಂತದ ಮೂಲಕ ಇನ್ನೂ ದಮನಿಸುತ್ತದೆ. ಜರ್ಮನಿಯಲ್ಲಿ ನೂರೆಂಬರ್ಗ್ ಕಾನೂನು ಜಾರಿಗೊಳಿಸಿ ಅಲ್ಲಿಯ ನಾಝಿ ಸರಕಾರವು ಯಹೂದಿಗಳ ಪೌರತ್ವವನ್ನು ರದ್ದುಪಡಿಸಿತು. ಜೊತೆಗೆ ಸರಕಾರಿ ಪದವಿಗಳಲ್ಲೂ ಅವರಿಗೆ ನಿರ್ಬಂಧ ಹೇರಲಾಯಿತು. ಇದೇ ರೀತಿಯ ತಾರತಮ್ಯ ಆಫ್ರೋ ಅಮೆರಿಕನ್ನರ ಮೇಲೆಯೂ ತೋರಲಾಯಿತು. 2017ರಲ್ಲಿ ಮ್ಯಾನ್ಮಾರ್‌ ನಲ್ಲೂ ಇಂತಹದೇ ನರಮೇಧ ನಡೆಯಿತು. ರೋಹಿಂಗ್ಯಾ ಮುಸ್ಲಿಮರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಹೊರದಬ್ಬಲಾಯಿತು. ಅಲ್ಲಿ ಹೆಣಗಳ ರಾಶಿಯೇ ಬಿತ್ತು ಮತ್ತು ಲಕ್ಷಾಂತರ ಜನರು ನಿರಾಶ್ರಿತರಾದರು.

4. Dehumanisation(ಅಮಾನವೀಯತೆ): ಒಂದು ಗುಂಪನ್ನು ಅಪಮಾನಿಸುತ್ತಾ ಅವರ ಮಾನವೀಯ ಘನತೆಗಳನ್ನು ನಿರಾಕರಿಸುವುದು. ಒಂದು ನಿರ್ದಿಷ್ಟ ಗುಂಪನ್ನು ಮೃಗ ಕೀಟ ಹಾಗೂ ರೋಗಗಳಿಗೆ ಹೋಲಿಸುವ ಮೂಲಕ ಅವರ ಗೌರವಕ್ಕೆ ಧಕ್ಕೆಯಾಗುವಂತೆ ಮಾಡುವುದು. ದ್ವೇಷವನ್ನು ಪ್ರದರ್ಶಿಸುವ ಮತ್ತೊಂದು ವಿಧಾನವಾಗಿದೆ. ಆ ಗುಂಪನ್ನು ಅಮಾನವೀಯ ರೀತಿಯಲ್ಲಿ ಕಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಅವರ ವಿರುದ್ಧ ದ್ವೇಷದ ಕಿಡಿ ಕಾರುವುದು. ಕೆಲವೊಂದು ದೇಶಗಳಲ್ಲಿ ಈ ರೀತಿಯ ದ್ವೇಷವನ್ನು ಶಾಲಾ ಪಠ್ಯಪುಸ್ತಕಗಳಲ್ಲಿಯೂ ಅಳವಡಿಸಲಾಗಿದೆ. ಪ್ರಬಲ ಅಥವಾ ಶಕ್ತಿಯುತ ಗುಂಪು ಗುರಿಪಡಿಸಿದ ಅಲ್ಪಸಂಖ್ಯಾತ ಅಥವಾ ದುರ್ಬಲ ಗುಂಪನ್ನು ಕೀಳಾಗಿ ಕಂಡು ಎಲ್ಲಾ ರೀತಿಯಲ್ಲಿ ತಮ್ಮ ಗುಂಪಿನ ಶ್ರೇಷ್ಠತೆಯನ್ನು ಪ್ರತಿಪಾದಿಸುವುದು. ಪ್ರಬಲ ಗುಂಪು ದುರ್ಬಲ ವಿಭಾಗದ ಅಸ್ತಿತ್ವವನ್ನು ಕೇವಲ ಒಂದು ಸಂಖ್ಯೆಯ ರೂಪದಲ್ಲಿ ಸಮೀಕರಿಸುವುದು. ಇಲ್ಲಿ ಸರಕಾರವು ಬಹುಸಂಖ್ಯಾತರ ಮನವೊಲಿಸಲು ಲಭ್ಯ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರಿಗೆ ವಿರುದ್ಧವಾದ ನಿಲುವು ತೆಗೆದುಕೊಂಡು ಬಹುಸಂಖ್ಯಾತರನ್ನು ತುಷ್ಟೀಕರಿಸುತ್ತದೆ. ಕೆಲವೊಮ್ಮೆ ಅಂತಹ ಸಂದರ್ಭಗಳನ್ನು ತಾವಾಗಿಯೇ ಸೃಷ್ಟಿಸುವುದೂ ಇದೆ.

5.Organisation (ಆಯೋಜನೆ): ತಾರತಮ್ಯ ಧೋರಣೆ ಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು. ಎಲ್ಲಾ ನರಮೇಧವು ಒಂದು ಸಂಘಟಿತ ಪಿತೂರಿಯಾಗಿರುತ್ತದೆ. ಈ ಪಿತೂರಿಯನ್ನು ಸಾಮಾನ್ಯವಾಗಿ ಅಧಿಕಾರದಲ್ಲಿರುವ ಸರಕಾರ ಅಥವಾ ರಾಜಕಾರಣಿಗಳು ಸಮಯಕ್ಕೆ ತಕ್ಕಂತೆ ರಾಜಕೀಯ ಲಾಭವನ್ನು ಪಡೆಯಲು ಆಯೋಜಿಸುತ್ತಾರೆ. ಒಂದು ವಿಶೇಷ ತರಬೇತಿ ಪಡೆದ ಅನಧಿಕೃತ ಸೈನ್ಯವನ್ನು ಕಟ್ಟಿ ಜನರ ಮಾರಣಹೋಮ ನಡೆಸಲಾಗುತ್ತದೆ. ಇದು ಅಸಹಾಯಕ ಗುಂಪಿಗೆ ಚಿತ್ರಹಿಂಸೆ ಕೊಟ್ಟು ಅವರ ನರಮೇಧ ನಡೆಸುವ ಒಂದು ವ್ಯವಸ್ಥಿತ ಯೋಜನೆಯಾಗಿದೆ. ವಿವಿಧ ಸಂಘಟನೆಗಳ ಮೂಲಕ ಅದು ಕಾರ್ಯಗತಗೊಳ್ಳುತ್ತದೆ.

6.Polarisation (ಧ್ರುವೀಕರಣ): ಸಮಾಜವನ್ನು ನಾವು-ಅವರು ಎಂದು ಧ್ರುವೀಕರಿಸುವುದು. ಆತಂಕವಾದಿಗಳು ಸಮಾಜವನ್ನು ಒಡೆದು ಎರಡು ಗುಂಪುಗಳನ್ನಾಗಿಸುವ ಹುನ್ನಾರವನ್ನು ನಿರಂತರ ನಡೆಸುತ್ತಲೇ ಇರುತ್ತಾರೆ. ಈ ಗುರಿಯನ್ನು ಸಾಧಿಸಲು ಅವರು ಧ್ರುವೀಕರಣದ ಮೊರೆಹೋಗಿ ಜನರ ಮನದಲ್ಲಿ ದ್ವೇಷವನ್ನು ಉಂಟು ಮಾಡುತ್ತಾರೆ. ಈ ಉಗ್ರವಾದಿಗಳು ತಾವು ಗುರಿಪಡಿಸಿದ ನಿರ್ದಿಷ್ಟ ವರ್ಗದವರನ್ನು ಬೆದರಿಸಿ ಮೌನಗೊಳಿಸುತ್ತಾರೆ. ಇವರ ನಾಯಕರನ್ನು ಇಲ್ಲಸಲ್ಲದ ಕಾರಣಗಳನ್ನು ನೀಡಿ ಪದೇ ಪದೇ ಜನರ ಹಾಗೂ ಮಾಧ್ಯಮಗಳ ಮುಂದೆ ಶತ್ರುಗಳೆಂದು ಪ್ರಸ್ತುತ ಪಡಿಸುತ್ತಾರೆ. ಕೆಲವೊಮ್ಮೆ ಅವರ ಹತ್ಯೆ ಮಾಡಿ ಬಲಹೀನ ಗುಂಪನ್ನು ಮತ್ತಷ್ಟು ಕಾಡುತ್ತಾರೆ. ಕೊನೆಗೆ, ಬಲಹೀನ ಗುಂಪು ಪ್ರತಿಕ್ರಿಯಿಸುವ ಸಾಮರ್ಥ್ಯವನ್ನೇ ಕಳಕೊಂಡು ಪ್ರಬಲ ಗುಂಪಿನ ಅಡಿಯಾಳುಗಳಾಗಿ ಜೀವಿಸಬೇಕಾದ ವಾತಾವರಣ ನಿರ್ಮಾಣಗೊಳ್ಳುತ್ತದೆ.

7.Preparation (ಪೂರ್ವಸಿದ್ಧತೆ): ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು. ಇದರಲ್ಲಿ ಪ್ರಬಲ ವಿಭಾಗವು ದುರ್ಬಲ ವಿಭಾಗದ ವಿರುದ್ದ ಅವ್ಯಾಹತವಾಗಿ ಅಪಪ್ರಚಾರ ನಡೆಸಿ ಪ್ರಬಲರಿಗೆ ಅವರೊಂದು ಸವಾಲಾಗಿದ್ದಾರೆಂದು ಬಿಂಬಿಸುತ್ತಾರೆ. ಆ ನಿರ್ದಿಷ್ಟ ವಿಭಾಗವನ್ನು ನಾವು ಹಾಗೆಯೇ ಬಿಟ್ಟುಬಿಟ್ಟರೆ ನಮ್ಮ ಧರ್ಮ, ಸಂಸ್ಕೃತಿ, ಆಚರಣೆಗಳಿಗೆ ಅಪಾಯ ಕಾದಿದೆ ಎಂಬ ಸುಳ್ಳನ್ನು ಪ್ರಬಲರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡುತ್ತಾರೆ. ಇದರಿಂದ ನಾವು ರಕ್ಷಣೆ ಪಡೆಯಬೇಕಾದ ಏಕೈಕ ಪರಿಹಾರ ಮಾರ್ಗವೆಂದರೆ ಅವರ ಸಂಹಾರವಾಗಿದೆಯೆಂದು ತಮ್ಮ ವಿಭಾಗಕ್ಕೆ ಮನವರಿಕೆ ಮಾಡಿಕೊಡುತ್ತಾರೆ. ಈ ಸಂಹಾರಕ್ಕಾಗಿ ಅವರು ಎಲ್ಲಾ ವಿಧದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ, ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ತನಕ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ನರಹತ್ಯೆಗೆ ಅಗತ್ಯವಿರುವ ಬೌದ್ಧಿಕ, ಮೀಡಿಯಾ ಹಾಗೂ ಶಸ್ತ್ರಾಸ್ತ್ರಗಳ ಶಕ್ತಿ ಸಂಚಯನಗೊಳ್ಳುತ್ತದೆ.

8. Persecution (ಕಿರುಕುಳ): ಈ ಹಂತದಲ್ಲಿ ಪ್ರಭಾವಿ ಗುಂಪು ಗುರಿಯಾಗಿಸಿಕೊಂಡ ಗುಂಪನ್ನು ಅವರ ರಾಷ್ಟ್ರೀಯತೆ, ಬುಡಗಟ್ಟು, ಜಾತಿ, ಭಾಷೆ, ಧರ್ಮ ಮುಂತಾದ ಐಡೆಂಟಿಟಿಯ ಆಧಾರದಲ್ಲಿ ಬಲಿಪಶುಗಳನ್ನಾಗಿ ಮಾಡುತ್ತದೆ. ಪ್ರಬಲರ ಸಂಘಟನೆಗಳು ಮಾತ್ರವಲ್ಲದೆ, ಹಲವೊಮ್ಮೆ ಸರಕಾರಗಳಿಂದಲೂ ಇವುಗಳ ಹೆಸರಲ್ಲಿ ದುರ್ಬಲ ಗುಂಪಿಗೆ ಅನ್ಯಾಯ ನಡೆಯುತ್ತದೆ. ತಮ್ಮ ಐಡೆಂಟಿಯ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಪ್ರಬಲ ಗುಂಪು ಇಲ್ಲಿ ದುರ್ಬಲರ ಅಸ್ಮಿತೆಯನ್ನು ವಿಕೃತಗೊಳಿಸಿ ಅವರನ್ನು ಕೆರಳಿಸುವ ಯೋಜನೆ ಹಾಕಿಕೊಳ್ಳುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದಾಗ ದುರ್ಬಲ ಗುಂಪಿನ ಮೇಲೆ ದಾಳಿ ಆರಂಭವಾಗುತ್ತದೆ. ಎಷ್ಟರಮಟ್ಟಿಗೆಂದರೆ, ಅವರು ತಮ್ಮ ಮನೆಮಾರು, ಆಸ್ತಿಪಾಸ್ತಿಗಳನ್ನು ತೊರೆದು ಬೇರೆಡೆ ವಲಸೆಹೋಗುವಂತೆ ಅಥವಾ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯಪಡೆಯುವಂತಹ ದುಃಸ್ಥಿತಿ ಬಂದೊದಗುತ್ತದೆ. ಈ ನಿರಾಶ್ರಿತ ಶಿಬಿರಗಳಲ್ಲಿಯೂ ಕಿರುಕುಳ, ಚಿತ್ರಹಿಂಸೆ ಮುಂದುವರಿಯುತ್ತದೆ. ಅವರ ಜನಸಂಖ್ಯೆ ನಿಯಂತ್ರಿಸಲು ಬಲವಂತದ ಸಂತಾನಹರಣ ಚಿಕಿತ್ಸೆಯನ್ನು ನಡೆಸಲಾಗುತ್ತದೆ. ಈ ಹಂತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡಾ ನರರಾಕ್ಷಸರ ಕಿರುಕುಳದಿಂದ ಮುಕ್ತರಾಗಿರುವುದಿಲ್ಲ.

ಪ್ರಬಲರಿಂದ ಪ್ರತಿಷ್ಠಾಪಿಸಲ್ಪಟ್ಟ ಕಲ್ಪಿತ ಅಪಾಯಕಾರಿ ಗುಮ್ಮನ (ದುರ್ಬಲ ವರ್ಗ) ಮೂಲೋತ್ಪಾಟನೆಗಾಗಿ ಸಾಧ್ಯವಿರುವ ಎಲ್ಲಾ ಯೋಜಿತ ತಂತ್ರಗಳು ಕಾರ್ಯರೂಪಕ್ಕಿಳಿದು ಪ್ರಬಲರ ನಾಯಕರಿಗೆ ಸಮೃದ್ಧ ಫಸಲು ನೀಡುತ್ತದೆ.

9. Extermination (ನಿರ್ನಾಮ): ಇದೊಂದು ವ್ಯವಸ್ಥಿತ ಹಂತವಾಗಿದೆ. ಈ ಹಂತದಲ್ಲಿ ಪ್ರಬಲ ಗುಂಪು ದುರ್ಬಲ ಗುಂಪಿನ ಧೈರ್ಯವನ್ನು ಉಡುಗಿಸಲು ಸಾಮೂಹಿಕ ನರಹತ್ಯೆಗೆ ಮುಂದಾಗುತ್ತದೆ. ಅದರ ಪೂರ್ವಭಾವಿಯಾಗಿ ಪ್ರಬಲರ ನಡುವೆ ದುರ್ಬಲರ ಬಗ್ಗೆ ದ್ವೇಷದ ಕಿಚ್ಚು ಹೊತ್ತಿಸಲಾಗುತ್ತದೆ. ಕೊನೆಗೆ, ಈ ಕಿಚ್ಚು ಕಾಡ್ಗಿಚ್ಚಾಗಿ ಮಾರ್ಪಟ್ಟು ದುರ್ಬಲ ವರ್ಗದ ಸಂಹಾರ ತಾಂಡವ ನಡೆಯುತ್ತದೆ. ಈ ಹಂತ ಸರಕಾರಿ ಪ್ರಾಯೋಜಿತವಾಗಿದ್ದರೆ ರಾಷ್ಟ್ರೀಯ ಸೇನೆಯನ್ನು ಬಳಸಿ ದುರ್ಬಲರ ದಮನ ನಡೆಯುತ್ತದೆ. ನಾವು ಜಗತ್ತಿನ ಇತಿಹಾಸವನ್ನು ಗಮನಿಸಿದರೆ ನಡೆದ ನರಮೇಧಗಳಲ್ಲಿ ಹೆಚ್ಚಿನವುಗಳು ವ್ಯವಸ್ಥಿತವಾಗಿದ್ದವು. ಉದಾಃ ಬುರುಂಡಿಯಲ್ಲಿ 1972ರಲ್ಲಿ ನಡೆದ ನರಮೇಧದಲ್ಲಿ ವಿರೋಧಿ ಗುಂಪಿನ ಶಿಕ್ಷಿತರು ಮೊದಲ ಗುರಿಯಾಗಿದ್ದರು. ಇವರನ್ನು ಕೊಂದರೆ ದುರ್ಬಲ ಗುಂಪು ಮಾರ್ಗದರ್ಶಕರನ್ನು ಕಳೆದುಕೊಂಡು ನಡುಬೀದಿಯಲ್ಲಾಗುತ್ತದೆ. 1995ರಲ್ಲಿ ಬೋಸ್ನಿಯಾದಲ್ಲಿ ಪ್ರತಿರೋಧಿಸಲು ಶಕ್ತರಾದ ಯುವಕರನ್ನು ಗುರಿಯಾಗಿಸಿಕೊಳ್ಳಲಾಯಿತು. ಮ್ಯಾನ್ಮಾರ್‌ ನಲ್ಲಿ ಹೆಣ್ಮಕ್ಕಳ ಸಾಮೂಹಿಕ ಅತ್ಯಾಚಾರ ನಡೆಸಿ ನರಮೇಧ ನಡೆಸಲಾಯಿತು. ಈ ಹಂತದಲ್ಲಿ ದುರ್ಬಲ ಗುಂಪಿನ ಸ್ಥಿತಿ ಅತ್ಯಂತ ದಯನೀಯವಾಗಿರುತ್ತದೆ.

10.Denail (ನಿರಾಕರಣೆ): ಈ ಹಂತದಲ್ಲಿ ಪ್ರಬಲ ಗುಂಪು ತಾವು ಅಲ್ಪಸಂಖ್ಯಾತ ಅಥವಾ ದುರ್ಬಲರ ಮೇಲೆ ನಡೆಸಿದ ದೌರ್ಜನ್ಯಗಳ ಸಾಕ್ಷಿಗಳನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತದೆ. ನರಮೇಧ ನಡೆದಾಗ ಅವರ ಶವಗಳನ್ನು ಎಲ್ಲಿಯೋ ಹೂತು ಹಾಕಿ ಸಾಕ್ಷ್ಯಗಳನ್ನು ನಾಶಪಡಿಸಲಾಗುತ್ತದೆ. ತಮ್ಮ ಅಪರಾಧ ಬೆಳಕಿಗೆ ಬರದಂತೆ ಮಾಡಲು ಮಾಧ್ಯಮಗಳ ಬೆಂಬಲ ಪಡೆಯುವ ಇವರು, ಸರಕಾರಗಳ ಮೇಲೆ ಪ್ರಭಾವ ಬೀರಿ ಶಿಕ್ಷೆಯಾಗದಂತೆ ನೋಡಿಕೊಳ್ಳುತ್ತಾರೆ. ಕೆಲವೆಡೆಗಳಲ್ಲಿ ಸರಕಾರವೇ ಇವರ ಕೈಗೊಂಬೆಯಾಗಿರುವಾಗ ಕಾನೂನಿನ ಭಯ ಎಲ್ಲಿರುತ್ತದೆ?

ಜಗತ್ತಿನ ವಿವಿಧೆಡೆಗಳಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದವರು ತಮ್ಮ ನಿರ್ಮೂಲನೆಗಾಗಿರುವ ಈ ಹತ್ತು ಹಂತಗಳ ವಿರುದ್ಧ ಕಾರ್ಯಕ್ರಮ ರೂಪಿಸಿ, ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾಯಕಾರಿಯಾದ ಜನಾಂಗೀಯ ಬ್ಯಾಕ್ಟೀರಿಯಾಗಳಿಗೆ ಸೂಕ್ತ ರಾಸಾಯನಿಕವನ್ನು ಸಿಂಪಡಿಸುವ ಮೂಲಕ ಅದರ ಉಬ್ಬರಕ್ಕೆ ತಡೆಗೋಡೆ ನಿರ್ಮಿಸುವ ಕಾಲ ಸನ್ನಿಹಿತವಾಗಿದೆ.

ಬಲಿಷ್ಠ ಗುಂಪು-ಒಂದು ನಿರ್ದಿಷ್ಟ ಜನಾಂಗವನ್ನು ಗುರಿಯಾಗಿಟ್ಟುಕೊಂಡು ಆಕ್ರಮಣ ಮಾಡುವಾಗ ಅದೇ ಸ್ವರೂಪದ ಬೇರೆ ನಿರ್ದಿಷ್ಟ ಜನಾಂಗವು ಮೌನ ವಹಿಸಿದರೆ ಈ ಆಕ್ರಮಣ ಕ್ರಮೇಣ ಅವರನ್ನೂ ಗುರಿಯಾಗಿಟ್ಟುಕೊಳ್ಳುತ್ತದೆ  ಎಂಬ ವಾಸ್ತವಿಕತೆಗೆ ಜಗತ್ತಿನ   ಇತಿಹಾಸದಲ್ಲಿ ಹಲವಾರು ಉದಾ ಹರಣೆ ಗಳಿವೆ ಎನ್ನುವುದನ್ನು ಮರೆಯುವಂತಿಲ್ಲ.

ಭಾರತದಲ್ಲಿಯೂ ವಂಶಹತ್ಯೆ ಸೂಚನೆಗಳು ಕಂಡುಬರುತ್ತಿವೆ. ಹರಿದ್ವಾರದಲ್ಲಿ ಸಾಧು ಸಂತರ ವೇಷದಲ್ಲಿದ್ದವರು ನೀಡಿದ ನರಮೇಧದ ಕರೆಯನ್ನು ನಾವು ಇದೇ ದೃಷ್ಟಿಯಲ್ಲಿ  ಪರಿಗಣಿಸಬೇಕಾಗಿದೆ. ಮಾತ್ರವಲ್ಲ ಅಂತಹ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗದಂತೆ ಪ್ರಜಾಪ್ರಭುತ್ವವಾದಿಗಳು ಕಾರ್ಯತಂತ್ರ ರೂಪಿಸಿ ಸಂಘಪರಿವಾರದ ಯೋಜನೆಯನ್ನು  ವಿಫಲಗೊಳಿಸಬೇಕಾಗಿದೆ.

Join Whatsapp