►ಕಾಂಗ್ರೆಸ್ ನ ಹಲವು ಕಾರ್ಯಕರ್ತರು SDPI ಗೆ ಸೇರ್ಪಡೆ
ಹರೇಕಳ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹರೇಕಳ ಗ್ರಾಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಂಗಳೂರು ವಿಧಾನ ಸಭಾ ಕ್ಷೇತ್ರದ SDPI ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆಯವರ ಚುನಾವಣಾ ಪ್ರಚಾರ ಬಹಿರಂಗ ಸಭೆಯು ಗುರುವಾರ ಹರೇಕಳ ಕಡವಿನ ಬಳಿಯಲ್ಲಿ ನಡೆಯಿತು.
ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕರ ಸಭಾ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಪ್ರಥಮ ಬಾರಿಗೆ ಹರೇಕಳಕ್ಕೆ ಆಗಮಿಸಿದ SDPI ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿಯವರು, ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸಂಘ ಪರಿವಾರದ ಅಜೆಂಡಾಗಳನ್ನು ತಡೆಯಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ, ಅಂದು ಅಧಿಕಾರ ಕೈಯಲ್ಲಿರುವಾಗ ಸಂಘ ಪರಿವಾರವನ್ನು ಹತೋಟಿಯಲ್ಲಿಡಲು ಸಾಧ್ಯವಾಗದವರು, ಈಗ ನಿಷೇಧಿಸಲು ಹೊರಟಿದ್ದೇವೆ ಎನ್ನುವುದನ್ನು ನಂಬಲು ಸಾಧ್ಯವೇ ಎಂದು ಖಾರವಾಗಿ ನುಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬುರವರು ಮಾತನಾಡಿ, ಪದೇ ಪದೇ SDPI ಮೇಲೆ ಆರೋಪ ಹೊರಿಸಿ ಸವಾಲುಗಳನ್ನು ಹಾಕುವ ಶಾಸಕ ಯು ಟಿ ಖಾದರಿಗೆ ಪ್ರತಿಕ್ರಿಯಿಸಿದ ರಿಯಾಝ್ ಕಡಂಬುರವರು, ನಾವು SDPI ಯವರು ಸವಾಲುಗಳನ್ನು ಸ್ವೀಕರಿಸಿ ಮುನ್ನುಗುವವರು, ನಿಮ್ಮ ಎಲ್ಲಾ ಸವಾಲುಗಳಿಗೆ ಉತ್ತರಿಸುವ ಬೆನ್ನು ಮೂಳೆ ಇರುವವರು ಎಂಬುದನ್ನು ನೆನಪಿಡಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ಬಹಿರಂಗ ಪ್ರಚಾರ ಸಭೆಯ ಕೇಂದ್ರ ಬಿಂದು SDPI ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಸ್ಥಳೀಯ ಶಾಸಕರು ನಮ್ಮನ್ನು ಕೋಮುವಾದಿಗಳು ಎಂದು ಹೀಯಾಳಿಸುತ್ತಾರೆ, ಹಾಗಾದರೆ ಇಲ್ಲಿರುವ ಶೋಷಿತ ಸಮುದಾಯದೊಂದಿಗೆ ನಾವು ನಿಂತದ್ದು ತಪ್ಪೇ? ನೋವುಂಡ ಸಮುದಾಯಕ್ಕೆ ಸಾಂತ್ವನ ಹೇಳಿದ್ದು ತಪ್ಪೇ? ಬಡ ಜನರ ಸಂಕಷ್ಟಕ್ಕೆ ಆಸರೆಯಾಗಿದ್ದು ತಪ್ಪೇ? ಇದು ಕೋಮುವಾದವೇ ? ಎಂದು ಪ್ರಶ್ನೆಗಳ ಸುರಿಮಳೆಗೈದರು. ಮುಂದುವರಿದು ಮಾತನಾಡಿದ ರಿಯಾಝ್ ಫರಂಗಿಪೇಟೆಯವರು ಇದನ್ನು ನೀವು ಕೋಮುವಾದ ಎನ್ನುವುದಾದರೆ ನಾವು ಕೋಮುವಾದಿಗಳೇ ಎನ್ನುವುದರಲ್ಲಿ ಹಿಂಜರಿಕೆಯಿಲ್ಲ ಎಂದರು.
ಬಹಿರಂಗ ಸಭಾ ಕಾರ್ಯಕ್ರಮದಲ್ಲಿ SDPI ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹರೇಕಳಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ SDPI ರಾಷ್ಟೀಯ ಅಧ್ಯಕ್ಷ ಎಂ.ಕೆ ಫೈಝಿಯವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು, SDPI ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷರಾಗಿ ಆಯ್ಕೆಯಾಗಿ ಹರೇಕಳಕ್ಕೆ ಆಗಮಿಸಿದ ಅನ್ವರ್ ಸಾದತ್ ರವರನ್ನು ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಕಾಂಗ್ರೆಸ್ ನ ಹಲವು ಕಾರ್ಯಕರ್ತರು SDPI ಗೆ ಸೇರ್ಪಡೆಗೊಂಡರು.
ಬಹಿರಂಗ ಸಭೆಯ ವೇದಿಕೆಯಲ್ಲಿ SDPI ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಸುಹೈಲ್, SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ, SDTU ಕ್ಷೇತ್ರ ಸಮಿತಿ ಅಧ್ಯಕ್ಷ ರಹಿಮಾನ್ ಮುನ್ನೂರು, ಕ್ಷೇತ್ರ ಸಮಿತಿ ಉಪಾಧ್ಯಕ್ಷ ರವಿ ಕುಟಿನ್ಹ, SDPI ಮುನ್ನೂರು ಬ್ಲಾಕ್ ಅಧ್ಯಕ್ಷ ಅಬ್ದುಲ್ ಬಶೀರ್, ಕೊಣಾಜೆ ಬ್ಲಾಕ್ ಅಧ್ಯಕ್ಷ ಕಮರುದ್ದೀನ್, SDPI ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಅಸೀಫ್, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕಮರುನ್ನೀಸಾ, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ, SDPI ಪಾವೂರು ಸಮಿತಿಯ ಹಿರಿಯ ಸದಸ್ಯ ಪುತ್ತಕ ಮಲಾರ್ ಉಪಸ್ಥಿತಿಯಿದ್ದರು. ಬಹಿರಂಗ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಸಾರ್ವಜನಿಕ ಬಂಧುಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬಹಿರಂಗ ಪ್ರಚಾರ ಸಭೆಗೆ ಮುನ್ನ ಹರೇಕಳ ಗ್ರಾಮ ಮತ್ತು ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ನಡೆದ ಬೈಕ್ ರ‍್ಯಾಲಿ ಮತ್ತು ರೊಡ್ ಷೋ ದಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಆಸೀಫ್ ಸ್ವಾಗತಿಸಿದರು, ಮಂಗಳೂರು ಕ್ಷೇತ್ರ ಸಮಿತಿ ಸದಸ್ಯ ಸಲಾಂ ವಿದ್ಯಾನಗರ ಕಾರ್ಯಕ್ರಮವನ್ನು ನಿರೂಪಿಸಿದರು, ಹರೇಕಳ ಗ್ರಾಮ ಸಮಿತಿ ಕಾರ್ಯದರ್ಶಿ ಅಬ್ದುಲ್ ರಶೀದ್ ಹೆಚ್ ಕಾರ್ಯಕ್ರಮವನ್ನು ಧನ್ಯವಾದಿಸಿದರು.