ಬರೋಡ: ಟೀಂ ಇಂಡಿಯಾ ಸದಸ್ಯ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಡಿವೋರ್ಸ್ ಪಡೆದಿದ್ದಾರೆ ಎನ್ನುವ ವರದಿಗಳು ಕಳೆದ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ನತಾಶ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಟೀಂ ಇಂಡಿಯಾ ತಂಡ ಪ್ರಕಟಿಸುತ್ತಿದ್ದಂತೆ ಇತ್ತ ಡಿವೋರ್ಸ್ ಕುರಿತು ಹಾರ್ದಿಕ್ ಪಾಂಡ್ಯ ಘೋಷಣೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಭಾವುಕ ಪೋಸ್ಟ್ ಹಾಕಿದ ಕ್ರಿಕೆಟಿಗ, ಕಳೆದ ನಾಲ್ಕು ವರ್ಷಗಳಿಂದ ನತಾಶ ಹಾಗೂ ನಾನು ಜೊತೆಯಾಗಿ ಹೆಜ್ಜೆ ಹಾಕಿದ್ದೆವು. ಜೊತೆಯಾಗಿ ನಾವು ಹಲವು ಸಂತಸದ ಕ್ಷಣಗಳನ್ನು ಕಳೆದಿದ್ದೇವೆ. ಪರಸ್ಪರ ಗೌರವಿಂದ ಕಂಡಿದ್ದೇವೆ. ಉತ್ತಮ ಸಂಗಾತಿಯಾಗಿ ಮುನ್ನಡೆದಿದ್ದೇವೆ. ಒಂದು ಕುಟುಂಬವಾಗಿ ನಾವು ಹೆಜ್ಜೆ ಹಾಕಿದ್ದೇವೆ. ಜೊತೆಯಾಗಿರಲು ಹಲವು ಪ್ರಯತ್ನ ನಡೆಸಿದ್ದೇವೆ. ಡಿವೋರ್ಸ್ ನಮಗೆ ಸುಲಭದ ನಿರ್ಧಾರವಾಗಿರಲಿಲ್ಲ ಎಂದಿದ್ದಾರೆ.
ನಮ್ಮಿಬ್ಬರಿಗೆ ಮಗ ಅಗಸ್ತ್ಯನಿದ್ದಾನೆ. ಆಗಸ್ತ್ಯ ನಮ್ಮಿಬ್ಬರ ಪ್ರಮುಖ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಆತನಿಗೆ ನಾವಿಬ್ಬರು ಪೋಷಕರಾಗಿದ್ದೇವೆ. ಆತನ ಜವಾಬ್ದಾರಿ ನಮ್ಮಿಬ್ಬರಿಗೂ ಇದೆ. ಆತನ ಖುಷಿ, ಸಂತೋಷಕ್ಕೆ ನಾವು ಎಲ್ಲವನ್ನೂ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಎಲ್ಲರಲ್ಲಿ ಕಳಕಳಿಯ ಮನವಿ ಮಾಡುತ್ತೇವೆ. ನಮ್ಮ ಖಾಸಗಿ ಕ್ಷಣಗಳಿಗೆ ಗೌರವ ನೀಡಿ. ಈ ಕಠಿಣ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ.
ಟಿ20ಯಲ್ಲಿ ತೆರವಾಗಿರುವ ನಾಯಕ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತುಂಬಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಶ್ರೀಲಂಕಾ ವಿರುದ್ಧದ ಸರಣಿಗೆ ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ.
2020ರ ಮಾರ್ಚ್ 31 ರಂದು ಹಾರ್ದಿಕ್ ಮತ್ತು ನತಾಶ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.